ಮೈಸೂರು : ಸೋತು ಸುಣ್ಣವಾಗಿದ್ದ ಬಿಜೆಪಿ ಚುಕ್ಕಾಣಿ ಹಿಡಿದಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಒಂದು ಕಡೆ ವಿಧಾನಸಭೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಕಾರ್ಯಕರ್ತರಿಗೆ ಆತ್ಮ ವಿಶ್ವಾಸ ತುಂಬಿ ಪಕ್ಷವನ್ನು ಲೋಕ ಸಭಾ ಚುನಾವಣೆಗೆ ತಯಾರಿ ಮಾಡಬೇಕಿದೆ.
ಹಿರಿಯರ ಅಸಮಾಧಾನ
ಬಿವೈ ವಿಜಯೇಂದ್ರಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟಿರೋದು ಕೆಲ ಬಿಜೆಪಿ ಹಿರಿಯ ನಾಯಕರಿಗೆ ಸಿಟ್ಟು ತರಿಸಿದೆ. ಯಡಿಯೂರಪ್ಪ ವಿರೋಧಿ ಬಣದ ಕೆಲ ನಾಯಕರು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಟವೆಲ್ ಹಾಕಿ ಕಾದು ಕುಳಿತಿದ್ದರು. ಕಳೆದ ವಿಧಾನಸಭಾ ಚುನಾವಣೆ ಸೋಲು ಕೇಂದ್ರ ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಯಡಿಯೂರಪ್ಪರಿಲ್ಲದೆ ಏನು ಮಾಡಲಿಕ್ಕೆ ಆಗಲ್ಲ ಎಂಬ ಸತ್ಯಾಂಶವನ್ನು ತಿಳಿಸಿದೆ ಹೀಗಾಗಿ ಯಡಿಯೂರಪ್ಪಗೆ ಮತ್ತೆ ಮಣೆ ಹಾಕಿ ಅವರ ಮಾರ್ಗದರ್ಶನದಂತೆ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರನ್ನು ತಂದು ಕೂರಿಸಿದೆ. ಇದರಿಂದ ಕೇಂದ್ರ ಮಾಜಿ ಸಚಿವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ವಿ ಸೋಮಣ್ಣ ಅರವಿಂದ್ ಬೆಲ್ಲದ ಸಿಟಿ ರವಿ ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರಿಗೆ ಇರಿಸಿ ಮುರಿಸು ತಂದಿದೆ.
ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರಿಗೆ ಕೇಂದ್ರ ನಾಯಕರು ಸೊಪ್ಪು ಹಾಕದೆ ಯಡಿಯೂರಪ್ಪಗೆ ಜೈ ಅಂದಿದೆ. ಇದರಿಂದ ಅಸಮಾಧಾನ ಹೊರ ಹಾಕಿರುವ ನಾಯಕರು ವಿಜಯೇಂದ್ರ ಆರ್.ಅಶೋಕ್ ಆಯ್ಕೆಗೆ ಸಹಮತ ವ್ಯಕ್ತ ಪಡಿಸಿಲ್ಲ. ಹೀಗಾಗಿ ಇಬ್ಬರು ನಾಯಕರಿಗೆ ಈಗ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಟಾಸ್ಕ್ ಎದುರಾಗಿದೆ. ನೆನ್ನೆ ಬೆಳಗಾವಿ ನಾಯಕ ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ ವಿಜಯೇಂದ್ರ ರಮೇಶ್ ಜಾರಕಿಹೊಳಿ ಸಿಟ್ಟನ್ನು ತಣಿ ಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಯತ್ನಾಳ್ ಯಾರು ನನ್ನ ಬಳಿ ಬರಬೇಡಿ ಎಂದು ಹೇಳಿದ್ದಾರೆ. ಇತ್ತ ವಿ.ಸೋಮಣ್ಣ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಯಡಿಯೂರಪ್ಪರನ್ನು ನಾನು ಸಂಪರ್ಕ ಮಾಡಿಲ್ಲ ನಾನು ಅವರನ್ನು ಮಾಡಿಲ್ಲ ನಾನು ಯಾರ ಜೊತೆ ಸದ್ಯಕ್ಕೆ ಮಾತನಾಡುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದಲ್ಲಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ರಾಜಕಾರಣ ಕುಟುಂಬಕ್ಕೆ ಸೀಮಿತವಲ್ಲ ಎಂದು ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ಗುಟುರು ಹಾಕಿದ್ದಾರೆ. ಅಲ್ಲದೆ ಡಿಸೆಂಬರ್ 6ರ ನಂತರ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಕಟ್ಟಿ ಹಾಕ್ತಾರ ವಿಜಯೇಂದ್ರ ?
ಇನ್ನು ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕುತ್ತಾರಾ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ. ಬಿಜೆಪಿ ಪ್ರಬಲ ಎದುರಾಳಿ ಕಾಂಗ್ರೆಸ್, ಲೋಕಸಭೆಯಲ್ಲಿ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಬೇಕಾದರೆ ಸಿದ್ದರಾಮಯ್ಯ ಹಾಗೂ ಡಿಕೆ ಏಟಿಗೆ ವಿಜಯೇಂದ್ರ ಎದಿರೇಟು ಕೂಡಲೇಬೇಕು. ರಾಜಕೀಯ ಗರಡಿಯಲ್ಲಿ 45 ವರ್ಷದಿಂದ ಪಳಗಿರುವ ಸಿದ್ದು ಹಾಗೂ ಡಿಕೆ ಶಿವಕುಮಾರ್ ರನ್ನು ಯಾವ ರೀತಿಯಲ್ಲಿ ವಿಜಯೇಂದ್ರ ಎದುರಿಸುತ್ತಾರೆ ಕಾದು ನೋಡಬೇಕಿದೆ. ಜೆಡಿಎಸ್ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿ ಬಿಜೆಪಿ ಇದೇ. ಇತ್ತ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಸರ್ಕಾರದ ಅಕ್ರಮಗಳ ಬಗ್ಗೆ ದ್ವನಿ ಎತ್ತುತ್ತಿದ್ದಾರೆ. ವಿಜಯೇಂದ್ರ ಬೆನ್ನಿಗೆ ಯಡಿಯೂರಪ್ಪ ಕುಮಾರಸ್ವಾಮಿ ಬೆನ್ನಿಗೆ ದೇವೇಗೌಡರು ನಿಂತಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಜೋಡಿಗೆ ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರಗೆ ಸಾಲು ಸಾಲು ಸವಾಲುಗಳಿವೆ. ಎಲ್ಲವನ್ನೂ ಮೀರಿ ವಿಜಯದ ನಗು ಬೀರುತ್ತಾರಾ ತಂದೆಯಂತೆ ಎಲ್ಲವನ್ನೂ ಮೀರಿ ಗೆಲ್ಲುತ್ತರಾ ಪಕ್ಷದ ಒಳ ವಿರೋಧಿಗಳು ಹಾಗೂ ವಿರೋಧ ಪಕ್ಷದ ನಾಯಕರಿಗೆ ಟಕ್ಕರ್ ಕೊಡ್ತಾರ ಕಾದು ನೋಡಬೇಕಿದೆ.
ಆನಂದ್.ಕೆ.ಎಸ್