ಮೈಸೂರು : ಗೋಕುಲಂನಲ್ಲಿರುವ ಪ್ರತಿಷ್ಠಿತ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ಬೀಗ ಜಡಿಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಆಸ್ಪತ್ರೆ ವೈದ್ಯ ಡಾ.ಚಂದ್ರಶೇಖರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆಯೂ ಸೂಚಿಸಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸುವಂತೆಯೂ ನಿರ್ದೇಶನ ನೀಡಲಾಗಿದೆ.
26-7-2013 ರಂದು ಯಾದವಗಿರಿ ನಿವಾಸಿ ಬಿ.ಶಿವಣ್ಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಡಾ.ಚಂದ್ರಶೇಖರ್ ಕಾರಣ ಅನ್ನೋದು ಕುಟುಂಬಸ್ಥರ ಆರೋಪವಾಗಿತ್ತು. ಈ ಸಂಬಂಧ ಮೈಸೂರಿನ ರವಿಗೌಡ ಎಂಬವರು ಡಿಸೆಂಬರ್ 16, 2021 ರಂದು ಆಸ್ಪತ್ರೆ ಹಾಗು ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು. ಆರೋಗ್ಯ ಇಲಾಖೆಯ ಜಾಗೃತಕೋಶದ ಜಾಗೃತಾಧಿಕಾರಿಗೆ ದೂರು ಸಲ್ಲಿಕೆ ಮಾಡಿದ್ದರು. ಅಂತೆಯೇ ಡಾ.ಚಂದ್ರಶೇಖರ್ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿತ್ತು. ಆದೇಶದಲ್ಲಿ ವೈದ್ಯ ಚಂದ್ರಶೇಖರ್ ಐದು ಅಂಶಗಳ ಲೋಪ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಅಂತೆಯೇ ಕೆಪಿಎಂಇ (KARNATAKA PRIVATE MEDICAL ESTABLISHMENT) ಕಾಯ್ದೆ ಪ್ರಕಾರ ಆಸ್ಪತ್ರೆ ಕರ್ತವ್ಯ ಲೋಪ ಎಸಗಿರೋದು ಸಾಬೀತಾಗಿದೆ. ಕೆಪಿಎಂಇ ಅಧ್ಯಕ್ಷರು ತನಿಖೆ ನಡೆಸಿ, ಸರ್ಕಾರಕ್ಕೆ ಮಾಡಿದ ಶಿಫಾರಸ್ಸಿನಂತೆ ಆದಿತ್ಯ ಅಧಿಕಾರಿ ನರ್ಸಿಂಗ್ ಹೋಂ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.
ಡಾ.ಚಂದ್ರಶೇಖರ್ ಅನಸ್ತೇಷಿಯ ವೈದ್ಯರಲ್ಲ. ಅನಧಿಕೃತವಾಗಿ ಬಿಎಎಂಎಸ್ ವ್ಯಾಸಂಗ ಮಾಡಿರುವವರ ನೋಂದಣಿ ಆರೋಪ ಸಾಬೀತಾಗಿದೆ. ಅನಸ್ತೇಶಿಯಾ ವಿಷಯದಲ್ಲಿ ವಿದ್ಯಾರ್ಹತೆ ಹೊಂದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಅವಿದ್ಯಾವಂತ ನರ್ಸಿಂಗ್ ಸ್ಟಾಫ್ ನೇಮಕ ಮಾಡಿಕೊಂಡಿದ್ದಾರೆ ಅನ್ನೋದು ತನಿಖೆಯಿಂದ ತಿಳಿದುಬಂದಿತ್ತು.