ಬೆಂಗಳೂರು : ಅಳೆದು ತೂಗಿ ಕೊನೆಗೂ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿದೆ. ಆರ್ ಅಶೋಕ್ ಅವರು ವಿಪಕ್ಷ ನಾಯಕನ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಆರ್.ಅಶೋಕ್ ಹೆಸರು ಘೋಷಣೆ ಮಾಡಲಾಗಿದೆ. ಅಶೋಕ್ ಹೆಸರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ಕೊಟ್ಟರೆ, ಶಾಸಕ ಸುನಿಲ್ ಕುಮಾರ್ ಅನುಮೋದನೆ ನೀಡಿದರು.
ಬಿಜೆಪಿ ನಾಯಕರ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ಹೇಳಿದ್ದಾರೆ. ಯತ್ನಾಳ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೀಕ್ಷಕರ ಮುಂದೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ಆಯ್ಕೆಗೂ ಮುನ್ನ ಆರ್ ಅಶೋಕ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಸಭೆಗೂ ಮುನ್ನ ಅಸಾಮಾಧಾನ ಸ್ಫೋಟಗೊಂಡಿತ್ತು. ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಹೊರ ನಡೆದಿದ್ದಾರೆ. ಹೈಕಮಾಂಡ್ ನಿಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್ಗೆ ರಮೇಶ್ ಜಾರಕಿಹೊಳಿಯೂ ಸಾಥ್ ನೀಡಿದರು.