ತುಮಕೂರು : ಜಿಲ್ಲೆಯ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಮತ್ತು ಬೆಂಗಳೂರು ದಾಸರಹಳ್ಳಿಯ ಮಾಜಿ ಶಾಸಕ ಮಂಜುನಾಥ್ ಅವರು ಜೆಡಿಎಸ್ ತೊರೆದು ಇಂದು ಕಾಂಗ್ರೆಸ್ ಸೇರಲಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರನ್ನು ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಳ್ಳಲಿದ್ದಾರೆ. ಮಾಜಿ ಶಾಸಕರ ಜೊತೆ ನೂರಾರು ಬೆಂಗಲಿಗರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಗೌರಿಶಂಕರ್ ಮತ್ತು ಮಂಜುನಾಥ್ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ, ಅದು ಸಫಲವಾಗಿಲ್ಲ. ಅಂತಿಮವಾಗಿ ಇಬ್ಬರನ್ನು ಕಾಂಗ್ರೆಸ್ ಕರೆತರುವಲ್ಲಿ ಡಿ.ಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಗೌರಿಶಂಕರ್ ಅವರು ತುಮಕೂರು ಮತ್ತು ನೆಲಮಂಗಲ ಭಾಗದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದ್ದಾರೆ. ಮಂಜುನಾಥ್ ಅವರು ಕೂಡ ತಮ್ಮ ಕ್ಷೇತ್ರ ದಾಸರಹಳ್ಳಿಯಲ್ಲಿ ಹಿಡಿತ ಸಾಧಿಸಿದ್ದಾರೆ. ಇಬ್ಬರು ನಾಯಕರ ಕಾಂಗ್ರೆಸ್ ಸೇರ್ಪಡೆ ಜೆಡಿಎಸ್‌ಗೆ ದೊಡ್ಡ ನಷ್ಟ ಎಂದೇ ಹೇಳಬಹುದು.
ಗೌರಿಶಂಕರ್ ಮತ್ತು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಗೌರಿ ಶಂಕರ್ ಸುದ್ದಿ ಹಳೇದು. ನನಗೆ ಯಾವುದೇ ಶಾಕ್ ಆಗಿಲ್ಲ. ಅವರಿಗೆ ಅನುಕೂಲ ಆಗುವಂತೆ ತೀರ್ಮಾನ ಮಾಡ್ಕೊಳಿ ಅಂತ ನಾನೇ ಹೇಳಿದ್ದೇನೆ. ಅವರ ರಾಜಕೀಯ ಭವಿಷ್ಯಕ್ಕೆ ಎಲ್ಲಿ ಒಳ್ಳೆಯ ಅವಕಾಶ ಇದೆ ಅಲ್ಲಿಗೆ ಹೋಗ್ತಾರೆ ಎಂದಿದ್ದಾರೆ.