ಬೆಂಗಳೂರು :ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋದದ ಮೇರೆಗೆ ಪೋಕ್ಸೋ ಕೇಸ್‌ನಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅದರಂತೆ, ಮುರುಘಾ ಶ್ರೀ ಚಿತ್ರದುರ್ಗದ ಮುರುಘಾ ಮಠ ಪ್ರವೇಶಿಸುವಂತಿಲ್ಲ. ಅವರ ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಇಬ್ಬರಿಂದ ಶ್ಯೂರಿಟಿ ಒದಗಿಸಬೇಕು, ಕೋರ್ಟ್ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ.
ಮುರುಘಾ ಶ್ರೀಗೆ ಜಾಮೀನು ಸಿಕ್ಕಿದ್ದರೂ ಸದ್ಯಕ್ಕೆ ಅವರು ಜೈಲಿನಿಂದ ಬಿಡುಗಡೆ ಆಗುವುದು ಅನುಮಾನ ಎನ್ನಲಾಗಿದೆ. ಅವರ ವಿರುದ್ಧ ಎರಡು ಅತ್ಯಾಚಾರ ಕೇಸ್ ದಾಖಲಾಗಿದ್ದು, ಅವುಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಹೀಗಾಗಿ ಮತ್ತೊಂದು ಕೇಸ್‌ನಲ್ಲಿ ವಿಚಾರಣೆ ಬಾಕಿ ಇದ್ದು, ಅದರಲ್ಲೂ ಜಾಮೀನು ಸಿಗದೆ ಅವರು ಜೈಲಿನಿಂದ ಬಿಡುಗಡೆ ಆಗುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?: ಚಿತ್ರದುರ್ಗದ ಬೃಹನ್ಮಠದ ಅಧೀನದಲ್ಲಿದ್ದ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಲವು ವಿದ್ಯಾರ್ಥಿನಿಯರು ಆರೋಪ ಮಾಡಿದ್ದರು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೂಲಕ ವಿದ್ಯಾರ್ಥಿನಿಯರು ಮೈಸೂರಿನ ಠಾಣೆ ಮೆಟ್ಟಿಲೇರಿದ್ದರು.
ವಿದ್ಯಾರ್ಥಿನಿಯರ ದೂರಿನ ಮೇರೆಗೆ ಮುರುಘಾಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಳಿಕ ಆ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿತ್ತು. ಬಳಿಕ ʼಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆʼಯಡಿ ಪೊಲೀಸರು ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದರು