ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ಗಡಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಕಾವೇರಿ ನದಿ ನೀರು ಉಳಿವಿಗಾಗಿ ಶುಕ್ರವಾರ 52 ನೇ ದಿನವೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬೈನಾಕ್ಯೂಲರ್ ಹಾಕಿಕೊಂಡು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಚಿವರು, ಸಂಸದರನ್ನು ಹುಡುಕಿ ಕೊಡಿ ಎಂದು ಘೋಷಣೆ ಕೂಗುತ್ತಾ ವಿನೂತನವಾಗಿ ಚಳವಳಿ ನಡೆಸಿದರು.
ಚಾಮರಾಜನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಪರ ಸಂಘಟನೆಯ ಹೋರಾಟಗಾರರು, ಬೈನಾಕ್ಯೂಲರ್ ನ್ನು ಹಾಕಿಕೊಂಡು ಕಾವೇರಿ ನದಿ ನೀರು ವಿಚಾರದಲ್ಲಿ ಮಾತನಾಡದ ಕೇಂದ್ರ ಸಚಿವರು, ಸಂಸದರನ್ನು ಹುಡುಕಿ ಕೊಡಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಕರ್ನಾಟಕದ ಪರವಾಗಿಲ್ಲ ಎಂಬುದು ಸಾಭೀತಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಪರವಾಗಿ ನೈಜ ಮಾಹಿತಿಯನ್ನು ನೀಡಬಲ್ಲ ಪ್ರಾಧಿಕಾರ ರಚನೆಯಾಗಬೇಕೆಂದು ಆಗ್ರಹಿಸಿ, ರಾಜ್ಯದಿಂದ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಚಿವರು ಸಹ ಮೌನವಹಿಸಿರುವುದು ದುರುಂತವಾಗಿದೆ, ಅದರಲ್ಲೂ ಸಂಸದರು ಯಾರೂ ಕೂಡ ಮಾತನಾಡುದೇ ಇರುವುದು ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಹಿರಿಯ ಚಳವಳಿಗಾರ ಶಾ.ಮುರಳಿ, ಗು.ಪುರುಷೋತ್ತಮ, ಚಾ.ವೆಂ.ರಾಜಗೋಪಾಲ, ಚಾ.ಹ ರಾಮು , ನಿಜಧ್ವನಿ ಗೋವಿಂದರಾಜು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.