ಬೆಂಗಳೂರು :ಯಾವುದೇ ಕಾಂಗ್ರೆಸ್ ಶಾಸಕರು ಪಕ್ಷದ ಆಂತರಿಕ ವಿಚಾರಗಳ ಕುರಿತು ಹೇಳಿಕೆ ನೀಡಬಾರದು. ಇದು ಕೊನೆಯ ಎಚ್ಚರಿಕೆ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ನ ಮೂವರು ಶಾಸಕರಿಗೆ 50 ಕೋಟಿ ರೂಪಾಯಿ ಮತ್ತು ಮಂತ್ರಿ ಸ್ಥಾನದ ಆಫರ್ ನೀಡಲಾಗಿದೆ ಎಂಬ ವಿಚಾರದ ಕುರಿತು ಸದಾಶಿವನಗರದ ನಿವಾಸದ ಬಳಿ ಪ್ರತಿಕ್ರಿಯಿಸಿದ ಡಿಕೆಶಿ ಭಾರೀ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ. ದೊಡ್ಡವರು ಇದರಲ್ಲಿ ಪ್ರಯತ್ನ ಮಾಡ್ತಿದ್ದಾರೆ. ಬಹಳ ಪ್ರಯತ್ನ ಮಾಡ್ತಿದ್ದಾರೆ. ಆದರೆ, ಯಾವುದೂ ಫಲ ಕೊಡಲ್ಲ ಎಂದಿದ್ದಾರೆ.
ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ : ಪಕ್ಷದ ಆಂತರಿಕ ವಿಚಾರಗಳ ಕುರಿತು ಯಾವುದೇ ಶಾಸಕರು ಹೇಳಿಕೆ ನೀಡಬಾರದು ಎಂದು ಈ ಹಿಂದೆ ಡಿಕೆಶಿ ಎಚ್ಚರಿಕೆ ಕೊಟ್ಟಿದ್ದರು. ಆದರೆ, ಶಾಸಕರು ಅಲ್ಲಲ್ಲಿ ವಿವಿಧ ಹೇಳಿಕೆಗಳನ್ನು ಕೊಡ್ತಿದ್ದಾರೆ. ಈ ಹಿನ್ನೆಲೆ ಡಿಕೆಶಿ ಇಂದು ಮತ್ತೊಮ್ಮೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ‘ನಾನು ನಮ್ಮ ಪಕ್ಷದ ಶಾಸಕರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ, ಯಾರೂ ಕೂಡ ಪಕ್ಷದ ವಿಚಾರಗಳ ಕುರಿತು ಹೇಳಿಕೆ ಕೊಡಬೇಡಿ. ಇದನ್ನು ಮೀರಿ ಹೇಳಿಕೆ ಕೊಟ್ಟರೆ ನೋಟಿಸ್ ನೀಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಯಾವ ಟೀಂ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತ್ತೋ ಅದೇ ಟೀಂ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಮನೆ ಮನೆಗೆ ಹೋಗ್ತಿದೆ. ಹಣದ ಆಮಿಷದ ಜೊತೆಗೆ ಮಂತ್ರಿ ಸ್ಥಾನ ನೀಡುವ ಭರವಸೆ ಕೊಡ್ತಿದೆ. ಮೂವರು ಶಾಸಕರಿಗೆ 50 ಕೋಟಿ ರೂಪಾಯಿ ಹಣದ ಆಮಿಷ ಒಡ್ಡಲಾಗಿದೆ. ಈ ಕುರಿತ ಮಾಹಿತಿ ಮತ್ತು ವಿಡಿಯೋ ನನ್ನ ಬಳಿ ಇದೆ. ಸದ್ಯದಲ್ಲೇ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿ ಕುಮಾರ್ ಗಣಿಗ ನಿನ್ನೆ (ಅ.27) ಸ್ಪೋಟಕ ಹೇಳಿಕೆ ಕೊಟ್ಟಿದ್ದರು.