ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣ ವಿರುದ್ಧದ ತನಿಖೆಗೆ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಿದೆ.
ಇದಲ್ಲದೆ ಹೈಕೋರ್ಟ್ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು, ಸಿಬಿಐ ಮೇಲ್ಮನವಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಇಂದಿನ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ಸಿಬಿಐ ತನಿಖೆಯ ಸುಮಾರು 90 ಪ್ರತಿಶತ ಮುಗಿದ ನಂತರ, “ಅಫಿಡವಿಟ್‌ನಲ್ಲಿ ಮಾಡಿದ ಸುಳ್ಳು ಹೇಳಿಕೆಯ ಆಧಾರದ ಮೇಲೆ” ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಪೀಠಕ್ಕೆ ತಿಳಿಸಿದರು. ಕೇಂದ್ರ ಏಜೆನ್ಸಿಯ ಮನವಿಗೆ ಸಮ್ಮತಿಸಿದ ನ್ಯಾಯಮೂರ್ತಿ ಬೋಸ್ ನೇತೃತ್ವದ ಪೀಠವು ಉಪಮುಖ್ಯಮಂತ್ರಿ ಮತ್ತು ಇತರ ಪ್ರತಿವಾದಿಗಳ ಪ್ರತಿಕ್ರಿಯೆಯನ್ನು ಕೋರಿ ನೋಟಿಸ್ ಜಾರಿಗೊಳಿಸಿತು. ಆದರೆ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದೆ.
ಡಿಕೆ ಶಿವಕುಮಾರ್ ವಿರುದ್ಧದ 74 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ತನಿಖೆಗೆ ತಡೆ ನೀಡಿದೆ. ಈ ಆದೇಶ ಪ್ರಶ್ನಿಸಿ ಸಿಬಿಐ ಮೆಲ್ಮನವಿ ಸಲ್ಲಿಸಿತ್ತು. ಆಗಿನ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಅನುಮತಿ ಪಡೆದ ನಂತರ ಕೇಂದ್ರ ತನಿಖಾ ದಳವು ಸೆಪ್ಟೆಂಬರ್ 2019 ರಲ್ಲಿ ತನಿಖೆಯನ್ನು ಪ್ರಾರಂಭಿಸಿತ್ತು.
ಡಿ.ಕೆ ಶಿವಕುಮಾರ್ ಅವರ ಕಚೇರಿಗಳ ಮೇಲೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ನಂತರ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆ ಕೈಗೆತ್ತಿಕೊಂಡಿತ್ತು