ಚಾಮರಾಜನಗರ : ಪವಾಡ ಪುರುಷ ಮಲೆ ಮಹದೇಶ್ವರನಿಗೆ ಕಾಣಿಕೆ ರೂಪದಲ್ಲಿ ಅಮಾನ್ಯಗೊಂಡಿರುವ ನೋಟುಗಳನ್ನು ಭಕ್ತರು ಸಮರ್ಪಣೆ ಮಾಡಿದ್ದಾರೆ.
ದೇಶದಲ್ಲಿ ನೋಟು ಅಮಾನ್ಯೀಕರಣದ 7 ವರ್ಷಗಳ ಬಳಿಕ ಲಕ್ಷಾಂತರ ರೂಪಾಯಿ ಮೌಲ್ಯದ 500, 1,000 ರೂಪಾಯಿ ಮುಖಬೆಲೆಯ ನೋಟುಗಳು ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಿಕ್ಕಿದೆ.
ಸಂಗ್ರಹವಾಗಿದ್ದ ನೋಟುಗಳನ್ನು ಭಾನುವಾರ ಎಣಿಕೆ ಮಾಡಲಾಗಿದ್ದು, 1,000 ರೂ. ಮುಖಬೆಲೆಯ ನೋಟುಗಳು 677 ಸಿಕ್ಕಿವೆ (ಇದರ ಮೌಲ್ಯ 6,77,000 ರೂ.). 500 ರೂ. ಮುಖಬೆಲೆಯ ನೋಟುಗಳು 4,353 ( 21,76,500 ರೂ.) ಇದ್ದು, ಒಟ್ಟು 28,53,500 ಲಕ್ಷ ಹಣವನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. 2,000 ರೂ. ಮುಖಬೆಲೆಯ ನೋಟುಗಳು 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಆದರೆ, 28 ಲಕ್ಷ ಹಣ ಹುಂಡಿ ಸೇರಿದರೂ ಪ್ರಾಧಿಕಾರಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ.ಸೆಪ್ಟೆಂಬರ್ ತಿಂಗಳು ನಡೆದ ಹುಂಡಿ ಎಣಿಕೆಯಲ್ಲಿ 2.38 ಕೋಟಿ ರೂ. ಸಂಗ್ರಹವಾಗಿತ್ತು. ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 12 ಗಂಟೆಗಳ ಕಾಲ ಎಣಿಕೆ ಕಾರ್ಯ ನಡೆದಿತ್ತು. 36 ದಿನಗಳ ಅವಧಿಗೆ 2,38,43,177 ರೂ. ಸಂಗ್ರಹವಾಗಿತ್ತು. ಭಕ್ತರು 63 ಗ್ರಾಂ ಚಿನ್ನ ಹಾಗೂ 3.173 ಕೆ.ಜಿ ಬೆಳ್ಳಿಯನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.
ಅಮಾನ್ಯಗೊಂಡಿರುವ ನೋಟುಗಳನ್ನು ಭಕ್ತರು ಮಹದೇಶ್ವರ ಬೆಟ್ಟದ ಹುಂಡಿಗೆ ಹಾಕಬಾರದೆಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ಮನವಿ ಮಾಡಿದ್ದಾರೆ.