ಅಮರಾವತಿ : ಅಂಗಲ್ಲು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜಾಮೀನು ದೊರೆತರೂ ಚಂದ್ರಬಾಬು ನಾಯ್ಡು ಜೈಲಿನಲ್ಲೇ ಇರಲಿದ್ದಾರೆ. ಕೌಶಲ್ಯ ಅಭಿವೃದ್ಧಿ ಕಾರ್ಪೊರೇಷನ್ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.9ರಂದು ಬಂಧಿತರಾಗಿರುವ ನಾಯ್ಡು, ರಾಜಮಂಡ್ರಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಚಂದ್ರಬಾಬು ನಾಯ್ಡು ವಿರುದ್ಧ ಹಲವು ಪ್ರಕರಣಗಳಿವೆ. ಈ ಪೈಕಿ ಕೌಶಲ್ಯ ಅಭಿವೃದ್ಧಿ ಕಾರ್ಪೊರೇಷನ್ ಹಗರಣ ಪ್ರಕರಣದಲ್ಲಿ ಅವರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇನ್ನೊಂದು ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ ಈಗಾಗಲೇ ನಿರೀಕ್ಷಣಾ ಜಾಮೀನು ದೊರೆತಿದೆ. ಇಂದು ಅಂಗಲ್ಲು 307 ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಅಂಗಲ್ಲು 307 ಪ್ರಕರಣವು ಚಂದ್ರಬಾಬು ನಾಯ್ಡು ಮತ್ತು ಇತರ ಹಲವು ಟಿಡಿಪಿ ನಾಯಕರ ವಿರುದ್ಧ ವೈಎಸ್‌ಆರ್‌ಸಿಪಿಗೆ ಸಂಬಂಧಿಸಿದ ಸ್ಥಳೀಯ ಮುಖಂಡರ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ.