ಚಾಮರಾಜನಗರ : ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರವು ಕಣ್ಣು ಕಿವಿ ಇಲ್ಲದ ಗುಜರಿ ಸರ್ಕಾರವಾಗಿದೆ ಎಂದು ಆರೋಪಿಸಿದ ಕನ್ನಡ ಚಳವಳಿಗಾರರು ಚಾಮರಾಜನಗರದಲ್ಲಿ ಶುಕ್ರವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂದೆ ಜಮಾಯಿಸಿದ ಕನ್ನಡ ಚಳವಳಿಗಾರರು ಹಳೇ ಸೈಕಲ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಗುಜರಿಗೆ ಹಾಕುವಂತೆ ಅಣುಕು ಪ್ರದರ್ಶನ ಮಾಡಿದ್ದಲ್ಲದೆ ರಾಜ್ಯ ಸರ್ಕಾರವು ಗುಜರಿ ಹೋಗಲು ಸಿದ್ದವಾಗುವಂತ್ತಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ ಮಾತನಾಡಿ, ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವೆ ಉಂಟಾಗಿರುವ ಕಾವೇರಿ ಜಲ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ, ಈ ಜಲ್ವಂತ ಸಮಸ್ಯೆಯನ್ನು ಜೀವಂತವಾಗಿಟ್ಟುಕೊಂಡು ರಾಜಕೀಯ ಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ ಅವರುಗಳಿಗೆ ರಾಜ್ಯ ಜನತೆಯ ನೆಮ್ಮದಿ ಶಾಂತಿ ಬೇಕಾಗಿಲ್ಲ , ಅಧಿಕಾರದ ತೆವಲಿನಲ್ಲಿ ಮುಗ್ದರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಮುಖಂಡರಾದ ಚಾ.ವೆಂ. ರಾಜಗೋಪಾಲ್, ಗು.ಪುರುಷೋತ್ತಮ್, ಪಣ್ಯದಹುಂಡಿ ರಾಜು, ಮಹೇಶ್ ಗೌಡ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.