ಇತ್ತೀಚೆಗಷ್ಟೇ ಆಂದ್ರಪ್ರದೇಶದ ವಾಚಪಲ್ಲಿ ಬುಡಕಟ್ಟು ಜನರ ಮೇಲಿನ ನಡೆದ ಘನಘೋರ ಅನ್ಯಾಯದ ತೀರ್ಪು ಹೊರಬಿದ್ದಿತ್ತು. ರಕ್ಷಕರೇ ಭಕ್ಷಕರಾಗಿದ್ದ ಪ್ರಕರಣದಲ್ಲಿ ಸಾಕ್ಷಿಗಳು ಸಿಗದ ಕಾರಣ ಆರೋಪಿಗಳು ಖುಲಾಸೆ ಆಗಿದ್ರು. ಈಗ ಇಂತದ್ದೆ ಅನ್ಯಾಯಕ್ಕೆ ತುತ್ತಾಗಿದ್ದ ಉತ್ತರ ತಮಿಳುನಾಡಿನ ವಾಚಾತಿ ಬುಡಕಟ್ಟು ಗ್ರಾಮದ ಜನರಿಗೆ ಸಿಕ್ಕಿದ್ದ ನ್ಯಾಯವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ ಅನ್ನೋದೇ ಸಮಾಧಾನಕರ.
90ರ ದಶಕ.. ನರಹಂತಕ ವೀರಪ್ಪನ ಅಟ್ಟಹಾಸ ದಕ್ಷಿಣದ 3 ರಾಜ್ಯಗಳನ್ನ ಬೆಚ್ಚಿಬೀಳಿಸಿದ್ದ ಕಾಲಘಟ್ಟ. ಇಂತ ವೀರಪ್ಪನ್ ಗೆ ಸ್ಥಳೀಯ ಜನರು ಸಹಾಯ ಮಾಡುತ್ತಾರೆ ಅಂತ ಅವರ ಮೇಲೆ ಪ್ರಭುತ್ವಗಳು, ಪೊಲೀಸರು ನಡೆಸುತ್ತಿದ್ದ ಕ್ರೂರತನ ಒಂದೆರಡಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳನ್ನ ಕೇಳಿದ್ದೇವೆ. ಇಂತದ್ದೆ ಒಂದು ಅಮಾನುಷ ದೌರ್ಜನ್ಯಕ್ಕೆ ತುತ್ತಾಗಿದ್ದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಿಂದ 50 ಕಿ.ಮೀ ದೂರದ ಕಲ್ವರಾಯನ ಕಾಡಿನ ಬಳಿ ವಾಸಮಾಡ್ತಿದ್ದ ವಾಚಾತಿ ಗ್ರಾಮದ ಬುಡಕಟ್ಟು ಜನ.
ಅಸಹಾಯಕರ ಮೇಲೆ ನಿಷ್ಠುರ ಅಧಿಕಾರಿಗಳು ಎಸಗಬಹುದಾದದ ದೌರ್ಜನ್ಯ್ಯಕ್ಕೆ ಈ ವಾಚಾತಿ ಗ್ರಾಮದಲ್ಲಿ ನಡೆದ ಘಟನೆ ಅಳಿಸಲಾಗದ ಇತಿಹಾಸ. 3 ರಾಜ್ಯಕ್ಕೆ ಬೇಕಾಗಿದ್ದ ವೀರಪ್ಪನ ಹಿಡಿಯುವುದು ಆ ಕಾಲಕ್ಕೆ ಸವಾಲಿನಲ್ಲೇ ಸವಾಲಿನ ಕೆಲಸವಾಗಿತ್ತು. ವೀರಪ್ಪನ ಇಂತ ಜಾಗದಲ್ಲಿ ಅಡಗಿದ್ದಾನೆ ಎಂದು ಯಾವುದೇ ಮೂಲದಿಂದ ಮಾಹಿತಿ ಬಂದರೆ ಸಾಕು ಪೊಲೀಸರು ಆ ಜಾಗದ ಮೇಲೆ ದಾಳಿ ಮಾಡುತ್ತಿದ್ದರು. ಇದೇ ರೀತಿ 1992 ಜೂನ್ ತಿಂಗಳಲ್ಲಿ ವಾಚಾತಿ ಗ್ರಾಮದಲ್ಲಿ ವೀರಪ್ಪನ ಅಡಗಿದ್ದಾನೆ ಎಂದೂ.. ಈ ಗ್ರಾಮದಲ್ಲಿ ಶ್ರೀಗಂಧದ ಮರಗಳ ತುಂಡುಗಳನ್ನು ಅಡಗಿಸಿಟ್ಟಿದ್ದಾರೆ ಎಂದೂ ಪೊಲೀಸರು, ಅರಣ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ 269 ಮಂದಿ ಈ ಗ್ರಾಮದ ಮೇಲೆ ಜೂನ್ ತಿಂಗಳ 20ರ ಸಂಜೆ ದಾಳಿ ಮಾಡಿದ್ರು.
ವೀರಪ್ಪನ್ ಮೇಲಿನ ಕೋಪವನ್ನು ತಮ್ಮ ಮೇಲೆ ಹೇಗೆಲ್ಲ ಪ್ರಭುತ್ವ ತೀರಿಸಿಕೊಳ್ಳುತ್ತದೆ ಎಂಬ ಅರಿವಿದ್ದ ಅಲ್ಲಿನ ಬಹುತೇಕ ಗಂಡಸರು ಈ ದಾಳಿಯ ಸೂಚನೆ ಅರಿತು ಸಮೀಪದಲ್ಲೇ ಇದ್ದ ಬೆಟ್ಟಗುಡ್ಡಗಳಲ್ಲಿ ಅನೇಕ ದಿನಗಳ ಕಾಲ ಅವಿತುಕೊಂಡರು. ಆದರೆ ವಯಸ್ಕರಿಲ್ಲದ ಊರಿನಲ್ಲಿ ಇದ್ದ ಕೆಲವು ಮುದುಕರು, ಹೆಂಗಸರು, ಮಕ್ಕಳು ಅಧಿಕಾರಿಗಳು, ಪೊಲೀಸರು ದೌರ್ಜನ್ಯಕ್ಕೆ ತುತ್ತಾದ್ರು. ಊರಿನ ಮಧ್ಯಭಾಗದ ಆಲದ ಮರಕ್ಕೆ ಜನರನ್ನ ಕಟ್ಟಿ ಹಾಕಿ ಮನಸೋ ಇಚ್ಛೆ ಹೊಡೆದರು. ಆಲದ ಮರದ ಕೆಳಗಿದ್ದ ಮಾರಿಯಮ್ಮನ ಚಿಕ್ಕ ದೇಗುಲವನ್ನು ಧ್ವಂಸಗೊಳಿಸಿದರು. ಜಾನುವಾರುಗಳನ್ನ ಕೊಂದರು. ಮನೆಗಳನ್ನ ದೋಚಿದ್ರು. ಕೊನೆಗೆ 18 ಮಹಿಳೆಯರನ್ನ ಸಮೀಪದಲ್ಲೇ ಇದ್ದ ಕೆರೆಯ ಬಳಿ ಹೊತ್ತೊಯ್ದು ಅತ್ಯಾಚಾರ ನಡೆಸಲಾಯಿತು. ಇದರಲ್ಲಿ 13 ವರ್ಷದ ಹುಡುಗಿ ಸಹ ಇದ್ದಳು ಅನ್ನೋದು ಪಾಪಿಗಳ ಅಟ್ಟಹಾಸಕ್ಕೆ ಸಾಕ್ಷಿ. ನಾನು ಇನ್ನೂ ಶಾಲೆಗೆ ಹೋಗುತ್ತಿರುವ ಹುಡುಗಿ ನನ್ನನ್ನು ಬಿಟ್ಟುಬಿಡಿ ಎಂದರೂ ಕ್ರೂರಿಗಳ ಮನಸ್ಸು ಆ ವೇಳೆ ಕರಗಲಿಲ್ಲ.
ಕೊನೆಗೆ 90 ಮಹಿಳೆಯರು, 28 ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನರನ್ನ ಸುಳ್ಳು ಆರೋಪದಲ್ಲಿ ಬಂಧಿಸಿ ತಿಂಗಳುಗಟ್ಟಲೇ ಜೈಲಿನಲ್ಲಿಡಲಾಯಿತು. ಕಸ್ಟಡಿ ವೇಳೆಯೂ ಅವರಿಗೆ ಚಿತ್ರಹಿಂಸೆ ತಪ್ಪಿರಲಿಲ್ಲ. 2 ತಿಂಗಳ ನಂತರ ಜಾಮೀನಿನ ಮೇಲೆ ಬಿಡಲಾಯಿತು. ಬಳಿಕ ನ್ಯಾಯಕ್ಕಾಗಿ ಅಂಗಲಾಚಿದ ವಾಚಾತಿ ಜನರಿಗೆ ಅಲ್ಲಿನ ಸಿಪಿಐ(ಎಂ) ಮುಖಂಡರು, ಕೆಲವು NGO, ಮಾಜಿ ಶಾಸಕ ಎಂ.ಅಣ್ಣಾಮಲೈ ನೆರವಾದರು. ಕ್ರೂರ ಜನರ ವಿರುದ್ಧ FIR ದಾಖಲಾಯಿತು. ಸರ್ಕಾರಿ ಅಧಿಕಾರಿಗಳಿಂದ ವಾಚಾತಿ ಜನರ ಮೇಲೆ ನಡೆದ ಹಿಂಸೆ, ಸುಳ್ಳು ಆರೋಪ, ಅತ್ಯಾಚಾರದ ವಿರುದ್ಧ ಮದ್ರಾಸ್ ಹೈಕೋರ್ಟ್ ನಿರ್ದೇಶನ ಮೇರೆಗೆ 1995ರಲ್ಲಿ ಸಿಬಿಐ ತನಿಖೆ ಪ್ರಾರಂಭಿಸಿತು.
ಸುಧೀರ್ಘವಾದ ನ್ಯಾಯದ ಹಾದಿ..
1992ರಲ್ಲಿ ವಾಚಾತಿ ಗ್ರಾಮದ ಅಮಾಯಕ ಜನರ ಮೇಲೆ ನಡೆದ ಘೋರಾತಿ ಘೋರದ ತನಿಖೆ ನಡೆಸಿದ ಸಿಬಿಐ 1996 ಏಪ್ರಿಲ್ ನಲ್ಲಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಆದರೆ ಸರ್ಕಾರಿ ಅಧಿಕಾರಿಗಳು ತಾವು ತಪ್ಪು ಮಾಡೇ ಇಲ್ಲ ಎಂದು ಕೋರ್ಟ್ ಮುಂದೆ ವಾದಿಸಿದರು. ವಾದ-ಪ್ರತಿವಾದಗಳನ್ನ ಆಲಿಸಿದ್ದ ಧರ್ಮಪುರಿ ಜಿಲ್ಲಾ ನ್ಯಾಯಾಲಯ ಘಟನೆ ನಡೆದ 16 ವರ್ಷಗಳ ಬಳಿಕ ಅಂದ್ರೆ, 2011ರ ಸೆಪ್ಟೆಂಬರ್ 29ರಂದು ಎಲ್ಲಾ 269 ಆರೋಪಿಗಳು ಕೂಡ ದೋಷಿಗಳು ಎಂದು SC & ST ಕಾಯಿದೆಯ ಅಡಿಯಲ್ಲಿ ತೀರ್ಪು ನೀಡಿತು.
ಆದ್ರೆ ಈ 269 ಅಪರಾಧಿಗಳ ಪೈಕಿ 54 ಜನರು ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದರು. ಉಳಿದಿದ್ದ 215 ಜನರಲ್ಲಿ ನಾಲ್ವರು IFS ಅಧಿಕಾರಿಗಳು ಸೇರಿದಂತೆ 126 ಅರಣ್ಯ ಇಲಾಖೆ ಸಿಬ್ಬಂದಿ, 84 ಪೊಲೀಸರು ಮತ್ತು ಐವರು ಕಂದಾಯ ಅಧಿಕಾರಿಗಳು ಜೈಲು ಸೇರಿದರು.
(17 ಅತ್ಯಾಚಾರಿಗಳ ಪೈಕಿ 12 ಜನರಿಗೆ 17 ವರ್ಷಗಳ ಜೈಲು ಶಿಕ್ಷೆ ಮತ್ತು 5 ಜನರಿಗೆ 5 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಉಳಿದ ಆರೋಪಿಗಳಿಗೆ 1-2 ವರ್ಷ ಜೈಲು ಶಿಕ್ಷೆ ವಿಧಿಸಲಾಯ್ತು).
ಈ ಶಿಕ್ಷೆಯನ್ನ ಪ್ರಶ್ನಿಸಿ ಅಪರಾಧಿಗಳೆಲ್ಲ ಹೈಕೋರ್ಟ್ ಕದ ತಟ್ಟಿದ್ದರು. ಇದರಿಂದ ಸಂತ್ರಸ್ಥರು ಮತ್ತೆ ನ್ಯಾಯಾಲಯಕ್ಕೆ ಅಲಿಯುವ ಸ್ಥಿತಿ ಎದುರಾಯ್ತು.. ಆದ್ರೆ 12 ವರ್ಷಗಳ ಬಳಿಕ (29-ಅಕ್ಟೋಬರ್-2023) 215 ಮಂದಿ ಸರ್ಕಾರಿ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯ ತಮಗೆ ವಿಧಿಸಿದ್ದ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗಳನ್ನ ಮದ್ರಾಸ್ ಹೈಕೋರ್ಟ್ ನ್ಯಾ.ಪಿ.ವೇಲ್ಮರುಗನ್ ವಜಾಗೊಳಿಸಿದ್ದಾರೆ. ಹಾಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 18 ಮಹಿಳೆಯರಿಗೆ ತಕ್ಷಣ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಕ್ತ ಉದ್ಯೋಗವನ್ನು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ಈ ಪರಿಹಾರದಲ್ಲಿ ಅತ್ಯಾಚಾರದ ಆರೋಪಿಗಳಿಂದ 5 ಲಕ್ಷ ರೂಪಾಯಿ ವಸೂಲಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಅಷ್ಟಲ್ಲದೇ ಘಟನೆ ನಡೆದಾಗ ಇದ್ದ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ.
ಇಂತ ಮಹತ್ವದ ತೀರ್ಪು ನೀಡುವ ಮುನ್ನ ಅಂದ್ರೆ ಮಾರ್ಚ್ 4ರಂದು ಖುದ್ದು ನ್ಯಾಯಮೂರ್ತಿಗಳೇ ವಾಚಾತಿ ಗ್ರಾಮಕ್ಕೆ ಭೇಟಿ ನೀಡಿದ್ದರು. 30 ವರ್ಷಗಳ ಹಿಂದೆ ಸರ್ಕಾರಿ ಅಧಿಕಾರಿಗಳ ಅಮಾನುಷ ದಾಳಿಗೆ ತುತ್ತಾದ ಬುಡಕಟ್ಟು ಜನರ ಗ್ರಾಮವನ್ನ ಪರಿಶೀಲನೆ ಮಾಡಿ, ಸಂತ್ರಸ್ಥರ ಪೈಕಿ ಬದುಕುಳಿದಿದ್ದವರ ಜೊತೆ ಚರ್ಚಿಸಿದ್ದರು. ಬಳಿಕ ಇಂತ ಐತಿಹಾಸಿಕ ತೀರ್ಪು ನೀಡಿದ್ದಾರೆ.
ವಾಚಾತಿ ಜನರಿಗೆ ಸಿಕ್ಕ ಈ ನ್ಯಾಯ ಅವರ ಸುಧೀರ್ಘ ಹೋರಾಟದ ಫಲ. ಅನೇಕ ಸರ್ಕಾರೇತರ ಸಂಘ, ಸಂಸ್ಥೆಗಳು ವಾಚಾತಿ ಜನರ ಕೈಹಿಡಿಯದಿದ್ದರೆ ಅವರ ಮೇಲೆ ನಡೆದ ಅನ್ಯಾಯ ಕಲ್ವರಾಯನ ಕಾಡಲ್ಲಿ ಕಮರಿಹೋಗುತ್ತಿತ್ತು:
ಮಾಹಿತಿ: #TheSundayGuardian – Sharanya Manivannan article