ಹ್ಯಾಂಡ್ ಪೋಸ್ಟ್ : ಅಕ್ರಮವಾಗಿ ಕೇರಳಕ್ಕೆ ಸಾಗಣಿಕೆಯಾಗುತ್ತಿದ್ದ ಸುಮಾರು ೨೦೦ಕ್ಕೂ ಅಧಿಕ ಗೋವುಗಳನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿದಯಾ ಸಂಘದವರು ದಾಳಿ ನಡೆಸಿ ವಾಹನ ಸಮೇತ ಹಿಡಿದು ಅಂತರಸಂತೆ ಠಾಣೆ ಪೊಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ಳಬೆಳ್ಳಿಗೆ ಹ್ಯಾಂಡ್‌ಪೋಸ್ಟ್, ಅಂತರಸಂತೆ, ಕಾರಾಪುರ ಮಾರ್ಗವಾಗಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಅನ್ನು ದಾಟಿ ಕೇರಳಕ್ಕೆ ೫ ಬೃಹತ್ ಕಂಟೈನರ್ ಲಾರಿ ಮತ್ತು ೫ ಗೂಡ್ಸ್ ವಾಹನಗಳಲ್ಲಿ ಸಾಗಿಸುತ್ತಿದ್ದ ಸುಮಾರು ೨೦೦ಕ್ಕೂ ಅಧಿಕ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯರಿಂದ ಖಚಿತ ಮಾಹಿತಿಯ ಮೇರೆಗೆ ತಡರಾತ್ರಿ ಸಂಪೂರ್ಣ ಪ್ಲಾನ್ ಮಾಡಿಕೊಂಡ ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿಧಯೆ ಸಂಘದ ಸುಮಾರು ೧೩ಜನರ ತಂಡ ಮೂರು ತಂಡಗಳಾಗಿ ಕಾರ್ಯಾಚರಣೆ ಮಾಡಿದ್ದು, ಅಕ್ರಮವಾಗಿ ಗೋ ಸಾಗಿಸುತ್ತಿದ್ದ ೧೨ ವಾಹನಗಳಲ್ಲಿ ಪೈಕಿ ೧೦ ವಾಹನಗಳನ್ನು ಹಿಡಿದ್ದಾರೆ.
ಗೋ ಸಾಗಿಸುತ್ತಿದ್ದ ವಾಹನಗಳ ಪೈಕಿ ೨ ವಾಹನಗಳು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ದಾಟಿದ್ದು, ಅವುಗಳನ್ನು ಮಚ್ಚೂರು ಬಳಿ ಗೋಗ್ಯಾನ್ ಪ್ರಾಣಿಧಯೆ ಸಂಘದವರು ಹಿಡಿದಿದ್ದಾರೆ. ಇದರ ಮಾಹಿತಿ ತಿಳಿದ ಉಳಿದ ವಾಹನಗಳು ಮತ್ತೇ ಹಿಂತಿರುಗಿದ್ದು, ಅಂತರಸಂತೆ ಪೊಲೀಸ್ ಠಾಣೆ ಎದುರು ಅಡ್ಡಗಟ್ಟಿದ ಪೊಲೀಸ್ ಸಿಬ್ಬಂದಿ ಹಾಗೂ ಬ್ಯಾರಿಕೇಡ್‌ಗೆ ಗುದ್ದಿ ವೇಗವಾಗಿ ನುಗ್ಗಿದ್ದಾರೆ. ಬಳಿಕ ಸಿನಿಮಿಯಾ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು ನೂರಲಕುಪ್ಪೆ ಬಳಿ ವಾಹನಗಳನ್ನು ಅಡ್ಡಗಟ್ಟಿ ಕೆ.ಆರ್.ಪೇಟೆ, ಕಿಕ್ಕೇರಿ, ದರ್ಗ, ಮೈಸೂರು ಮೂಲದ ೧೧ ಮಂದಿ ಹಾಗೂ ಸುಮಾರು ೮ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ಯಾರಿಕೇಡ್ ಗುದ್ದಿ ಎಸ್ಕೇಪ್ ಆಗಲು ಯತ್ನ: ಮಚ್ಚೂರು ಬಳಿ ಎರಡು ವಾಹನಗಳನ್ನು ಹಿಡಿದ ಕೂಡಲೇ ಉಳಿದ ವಾಹನಗಳು ಮಾರ್ಗ ಬದಲಾಯಿಸಲು ಯತ್ನಿಸಿದ್ದು, ಅಂತರಸಂತೆ ಬಳಿ ಪೊಲೀಸ್ ಠಾಣೆಯ ಮುಂಭಾಗ ಅಡ್ಡಗಟ್ಟಿದ ಸಿಬ್ಬಂದಿಗೆ ಗುದ್ದಿದ್ದಲ್ಲದೇ ಬ್ಯಾರಿಕೇಡ್‌ಗೂ ಡಿಕ್ಕಿ ಹೊಡೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದರು. ಬಳಿಕ ನೂರಲಕುಪ್ಪೆ ಬಳಿ ಪೊಲೀಸ್ ಸಿಬ್ಬಂದಿ ಸುರೇಶ್, ಗುರು, ಸೋಮೇಶ್ ಹಾಗೂ ಗ್ರಾಮಸ್ಥರಾದ ಪ್ರಸನ್ನ ಮತ್ತಿನ್ನಿತ್ತರು ಸೇರಿ ವಾಹನಗಳನ್ನು ಚೇಸ್ ಮಾಡಿ ಅಡ್ಡಗಟ್ಟಿ ಹಿಡಿದಿದ್ದಾರೆ. ಒಟ್ಟಾರೆ ೫ ಬೃಹತ್ ಕಂಟೈನರ್ ಲಾರಿಗಳು ಹಾಗೂ ೫ ಗೂಡ್ಸ್ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನಗಳಲ್ಲಿದ್ದ ಸುಮಾರು ೨೦೦ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿ ಮೈಸೂರಿನ ಪಿಂಜಿರಾ ಪೋಲ್‌ಗೆ ರಾವಾನಿಸಿದ್ದಾರೆ. ಅಲ್ಲದೆ ೧೧ ಜನರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.
ಈ ಭಾಗದಲ್ಲಿ ಅಕ್ರಮವಾಗಿ ಗೋ ಸಾಗಾಣಿಕೆ ನಡೆಯುತ್ತಿದ್ದು, ಈ ಭಾಗದ ಮುಖಂಡರು ಹಾಗೂ ಕೆಲ ಅಧಿಕಾರಿಗಳೇ ಇದಕ್ಕೆ ಸಾತ್ ನೀಡುತ್ತಿದ್ದಾರೆ ಎಂದು ಠಾಣೆ ಮುಂದೆ ನೆರೆದಿದ್ದ ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದು ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿ ದಯೆ ಸಂಘದವರು ಈ ದಾಳಿ ನಡೆಸದಿದ್ದಲ್ಲಿ ಈ ಪ್ರಕರಣ ಬೆಳಕಿಗೇ ಬರುತ್ತಿರಲಿಲ್ಲ. ಎಲ್ಲಿಂದಲೋ ಗೋವುಗಳನ್ನು ತುಂಬಿಕೊಂಡು ವಾಹನಗಳು ಕರ್ನಾಟಕದ ಗಡಿಯನ್ನು ತಲುಪಿವೆ ಎಂದರೆ ಇದಕ್ಕೆ ದೊಡ್ಡ ದೊಡ್ಡ ಕೈಗಳ ಬೆಂಬಲವೇ ಇರಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ವೇಳೆ ಗೋ ಸಾಗಿಸುತ್ತಿದ್ದ ವಾಹನ ಚಾಲಕನೊಬ್ಬ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ‘ಕಳೆದ ೧೫ ದಿನಗಳಲ್ಲಿ ಮೂರು ಭಾರಿ ಕೇರಳಕ್ಕೆ ಗೋಗಳನ್ನು ಇದೇ ಮಾರ್ಗವಾಗಿ ಸಾಗಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಚೆಕ್‌ಪೊಸ್ಟ್‌ನಲ್ಲಿ ಗೋವುಗಳಿವೆ ಎಂದರೆ ಅವರು ಚೆಕ್ ಮಾಡುವುದಿಲ್ಲ ನಾವು ಸುಲಭವಾಗಿ ಕೇರಳಕ್ಕೆ ಸಾಗಿಸುತ್ತೇವೆ’ ಎಂದಿರುವ ವಿಡಿಯೋ ವೈರಲ್ ಆಗಿದ್ದು, ಗೋವುಗಳ ಸಾಗಣಿಕೆಯಲ್ಲಿ ತಾಲ್ಲೂಕಿನ ಕೆಲ ಅಧಿಕಾರಿಗಳು ಹಾಗೂ ಮುಖಂಡರು ಶಾಮಿಲಾಗಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿರುವುದಕ್ಕೆ ಪುಷ್ಠಿಕೊಡುವಂತಿದೆ.
ಸ್ಥಳಕ್ಕೆ ಡಿವೈಎಸ್‌ಪಿ ಮಹೇಶ್, ಸರಗೂರು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ರೆಡ್ಡಿ, ಅಂತರಸಂತೆ ಪಿಎಸ್‌ಐ ರವಿಶಂಕರ್ ಹಾಗೂ ಕ್ರೈಂ ವಿಭಾಗದ ಸಿಬ್ಬಂದಿ, ಅಂತರಸಂತೆ ಠಾಣೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.