ಚಾಮರಾಜನಗರ : ಕರ್ನಾಟಕ ತಮಿಳುನಾಡು ರಾಜ್ಯ ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತಷ್ಟು ಹೋರಾಟ ಹೆಚ್ಚಾಗಿದೆ.
ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಭಾನುವಾರವೂ ಸಹ ಹೋರಾಟ ಮುಂದುವರೆಸಿದ್ದು, ತಮಿಳುನಾಡಿಗೆ ಬಾರುಕೋಲಿನೇಟು ಕೊಡುವ ಮೂಲಕ ವಿನೂತನ ಚಳವಳಿ ನಡೆಸಿತು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನದಿಂದ ಬಾರುಕೋಲು ಹಿಡಿದು ಕಾವೇರಿ ನದಿ ನೀರಿಗಾಗಿ ಪ್ರತಿ ಭಾರಿಯೂ ಕ್ಯಾತೆ ತೆಗೆಯುತ್ತಿರುವ ತಮಿಳುನಾಡಿಗೆ ಬಾರುಕೋಲಿನೇಟು ಬಿದ್ದರೆ ಸುಮ್ಮನಾಗಬಹುದೆಂಬ ಸಂದೇಶ ರವಾನೆಗಾಗಿ ಕನ್ನಡ ಚಳವಳಿಗಾರರು ವಿನೂತನ ಚಳವಳಿ ನಡೆಸಿದರು.
ಕಾವೇರಿ ನದಿ ನೀರು ನಿರ್ವಾಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಸುಪ್ರಿಂ ಕೋರ್ಟ್ ಗೆ ತಿಳಿದಿದ್ದರೂ ಸಹ ಅಲ್ಲಿನ ನ್ಯಾಯಾದೀಶರು ತಮಿಳುನಾಡಿನ ಪರವಾಗಿಯೇ ತೀರ್ಪು ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರವು ತಮಿಳುನಾಡಿಗೆ ನೀರು ಬಿಡುತ್ತಿದೆ ಇದು ಕಾವೇರಿ ನದಿ ಪಾತ್ರದ ಜನತೆಗೆ ಮರಣಶಾಸನವಿದ್ದಂತೆ ಎಂದು ಪ್ರತಿಭಟನಾಕಾರರು ಹೇಳಿದರು.
ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಹಿರಿಯ ಚಳವಳಿಗಾರ ಶಾ.ಮುರಳಿ, ರಾಜ್ ಗೋಪಾಲ್,ಕುಮಾರ್, ನಿಜಧ್ವನಿ ಗೋವಿಂದರಾಜು ಸೇರಿದಂತೆ ಹಲವಾರು ಮಂದಿ ಬಾರುಕೋಲು ಚಳವಳಿಯಲ್ಲಿ ಭಾಗಿಯಾಗಿದ್ದರು.