– ಖಾಲಿ ಕೊಡ ಪ್ರದರ್ಶಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಚಾಮರಾಜನಗರ : ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟ ನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರ ಜಿಲ್ಲಾಡಳಿತ ಭವನದ ಮುಖ್ಯಗೇಟ್ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ತಮಿಳುನಾಡು, ಕರ್ನಾಟಕ ಸರ್ಕಾರ, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರ೦.ಶ್ರೀನಿವಾಸ ಗೌಡ ಮಾತನಾಡಿ, ಕನ್ನಡಿಗರು, ರೈತರ ವಿರೋಧದ ನಡುವೆಯೂ
ಮಂಡಳಿ ಪುನಃ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಮಾಡಿರುವುದು ಅತ್ಯಂತ ಖಂಡನೀಯ.ಈಗಾಗಲೇ ಮಳೆಯ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿದರೆ ಕಾವೇರಿ ಕೊಳ್ಳ ಬರಿದಾಗಿ ರಾಜ್ಯದ ಜನತೆಗೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಬಕೆಟ್ ಹಿಡಿದಿದೆ ಎಂದು ಲೇವಡಿ ಮಾಡಿದರು.
ಈ ಕೂಡಲೇ ತಮಿಳುನಾಡಿಗೆ ಹರಿಸುವ ನೀರನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತವನ್ನು ಬಲಿ ಕೊಡಬಾರದು. ತಮಿಳುನಾಡು ಕಾವೇರಿ ಕ್ಯಾತೆಯನ್ನು ಮುಂದುವರೆಸುತ್ತಿದ್ದರೆ ಗಡಿ ಕಾವೇರಿ ನದಿ ನೀರು ನಿರ್ವಹ ಬಂದ್ ಮಾಡಿ, ತಮಿಳುನಾಡು ವಾಹನಗಳು ರಾಜ್ಯ ಪ್ರವೇಶ ಮಾಡದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಚಾ.ರಾ.ಕುಮಾರ್, ಅರುಣ್ ಕುಮಾರ್, ಮಹೇಶ್ ಗೌಡ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ನಂಜುಂಡಸ್ವಾಮಿ, ಚಾ.ಹ.ರಾಮು, ವೀರಭದ್ರ, ತಾಂಡವಮೂರ್ತಿ, ದೊರೆ, ಆಟೋ ಸುರೇಶ್ ಇತರರು ಭಾಗವಹಿಸಿದ್ದರು.