ಕೊಪ್ಪಳ : ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇದ್ದು, ಹುದ್ದೆ ಭರ್ತಿಗೆ ಟೆಂಡರ್ ಕರೆಯಬಹುದು. ಬಿಡ್‌ನಲ್ಲಿ ಹೆಚ್ಚಿನ ಬೆಲೆ ನೀಡಿದವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಬಹುದು ಎಂದು ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ
ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲಾ ಸ್ಥಾನ, ಹುದ್ದೆ ಮಾರಾಟ ಆಗುತ್ತಿದ್ದವು. ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಇದು ಮತ್ತೆ ಸಾಬೀತಾಗಿದೆ. ಹಿಂದಿನ ಸರ್ಕಾರದಲ್ಲಿ ಸಿಎಂ ಹುದ್ದೆ 2.5 ಸಾವಿರ ಕೋಟಿಗೆ, ಮಂತ್ರಿ ಸ್ಥಾನ 70 ರಿಂದ 80 ಕೋಟಿಗೆ ಮತ್ತು ಶಾಸಕರ ಟಿಕೆಟ್ 5 ರಿಂದ 7 ಕೋಟಿಗೆ ಮಾರಾಟ ಆಗಿದ್ದವು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಈ ಮಾತು ಹೇಳಿದ್ದರು. ಈಗ ವಿರೋಧ ಪಕ್ಷದ ಸ್ಥಾನ ಖಾಲಿ ಇದ್ದು, ಟೆಂಡರ್ ಕರೆದಿಲ್ಲ. ಬಿಜೆಪಿ ನಾಯಕರು ಟೆಂಡರ್ ಕರೆದು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ಸ್ಥಾನ ತುಂಬಿಕೊಳ್ಳಬಹುದು. ಒಮ್ಮೆ ಟೆಂಡರ್ ಕರೆದಾಗ ಯಾರೂ ಭಾಗಿಯಾಗಿಲ್ಲ. ಮತ್ತೊಮ್ಮೆ ಟೆಂಡರ್ ಕರೆದು ಯಾರು ಹೆಚ್ಚು ಹಣ ಕೊಡುತ್ತಾರೋ ಅವರು ವಿರೋಧ ಪಕ್ಷದ ನಾಯಕ ಆಗಬಹುದು. ಎಂಪಿ ಟಿಕೆಟ್ ಕೂಡ ಮಾರಾಟ ಆಗಬಹುದು ಎಂದು ಭವಿಷ್ಯ ನುಡಿದರು
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ನಮಗೆ ಇನ್ನೂ ಹೆಚ್ಚು ಲಾಭ ಆಗುತ್ತೆ. ಜೆಡಿಎಸ್ ಜಾತ್ಯಾತೀತ ಎಂದು ಹೆಸರು ಇಟ್ಟುಕೊಂಡು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಇದಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಿಸಿದರು
ರಾಜ್ಯದ 162 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಗೈಡ್‌ಲೈನ್ಸ್ ಸಬಲೀಕರಣ ಮಾಡಲು ವಿಳಂಬ ಮಾಡಿತು. ಇದರಿಂದ ಬರ ಘೋಷಣೆ ಮಾಡಲು ತಡವಾಗಿದೆ. ಕೇಂದ್ರಕ್ಕೆ ನಮ್ಮ ಸಿಎಂ ಪತ್ರ ಬರೆದಿದ್ದಾರೆ. ಬರದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡದೇ ಗೈಡ್‌ಲೈನ್ ಸಬಲೀಕರಣ ಮಾಡಬೇಕು. ರಾಜ್ಯದ 25 ಸಂಸದರೂ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಒತ್ತಾಯಿಸಿದರು.