ದೆಹಲಿ : ಮಣಿಪುರ ಹಿಂಸಾಚಾರದ ವಿಚಾರವಾಗಿ ವಾಗ್ದಾಳಿ ನಡೆಸಿರುವ ಪ್ರತಿಪಕ್ಷಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಉತ್ತರ ನೀಡಿದ್ದಾರೆ. ರಾಜ್ಯದ ಬಿರೇನ್ ಸಿಂಗ್ ಸರ್ಕಾರವು ಸಮರ್ಥವಾಗಿ ಹಿಂಸಾಚಾರ ಪರಿಸ್ಥಿತಿಯನ್ನು ಎದುರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರತಿಪಕ್ಷಗಳ ಬೇಡಿಕೆಗಳನ್ನು ಅವರು ತಳ್ಳಿಹಾಕಿದ್ದಾರೆ.
ರಾಜ್ಯ ಸರ್ಕಾರವು ಸಹಕರಿಸದಿದ್ದಾಗ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. ಆದರೆ ಮಣಿಪುರ ಸರ್ಕಾರ ಹಿಂಸಾಚಾರವನ್ನು ಹತ್ತಿಕ್ಕಲು ಕ್ರಮ ಕೈಗೊಂಡಿದೆ. ಅಲ್ಲಿನ ಮುಖ್ಯಮಂತ್ರಿ ಈ ವಿಚಾರವಾಗಿ ಸಹಕರಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ರಾಜ್ಯದಲ್ಲಿ ಸುಮಾರು 36,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನರನ್ನು ದಾರಿತಪ್ಪಿಸಲು ಅವಿಶ್ವಾಸ ಮಂಡಿಸಲಾಗಿದೆ ಎಂದು ಆರೋಪಿಸಿದ ಅವರು, ದೇಶ ವಂಶಾಡಳಿತ, ಭ್ರಷ್ಟಾಚಾರ, ಜಾತೀಯತೆಯಿಂದ ನರಳುತ್ತಿತ್ತು. ಪ್ರಧಾನಿ ಮೋದಿ ಇದನ್ನೆಲ್ಲ ಮುಗಿಸಿ ದೇಶಕ್ಕೆ ಸಾಧನೆಯ ರಾಜಕಾರಣ ನೀಡಿದ್ದಾರೆ. ಸ್ವಾತಂತ್ರ್ಯದ ನಂತರ ಭಾರತವು ಸಂಪೂರ್ಣವಾಗಿ ನಂಬುವ ನಾಯಕರಿದ್ದರೆ ಅದು ಪ್ರಧಾನಿ ಮೋದಿ. ಈ ಅವಿಶ್ವಾಸ ನಿರ್ಣಯವು ಜನರ ಆಯ್ಕೆಯನ್ನು ಪ್ರತಿಬಿಂಬಿಸುವುದಿಲ್ಲ. ಕಾಂಗ್ರೆಸ್ ಪಕ್ಷದಂತೆ ಬಿಜೆಪಿ ಗೆಲ್ಲಲು ಲಂಚದ ಮೊರೆ ಹೋಗುವುದಿಲ್ಲ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ, ಆರ್ಟಿಕಲ್ 370 ಜವಾಹರಲಾಲ್ ನೆಹರೂ ಸರ್ಕಾರದಿಂದ ತಪ್ಪಾಗಿದೆ. ಇದನ್ನು ಆಗಸ್ಟ್ 5 ಮತ್ತು 6, 2019 ರಂದು ರದ್ದುಗೊಳಿಸಲಾಯಿತು. ಅದರೊಂದಿಗೆ ಕಾಶ್ಮೀರದಿಂದ ಎರಡು ಧ್ವಜಗಳು ಮತ್ತು ಎರಡು ಸಂವಿಧಾನಗಳು ಹೊರಟುಹೋದವು. ಮೋದಿ ಅವರು ದೇಶಕ್ಕೆ ಅದರ ಸಂಪೂರ್ಣ ಏಕೀಕರಣವನ್ನು ಖಚಿತಪಡಿಸಿದರು ಎಂದು ಅವರು ಹೇಳಿದ್ದಾರೆ.
ಇದರಿಂದ ಎನ್‍ಜಿಒವೊಂದು (ಕಾಂಗ್ರೆಸ್) ಇತ್ತೀಚೆಗೆ ಸಭೆ ನಡೆಸಿ ಕೇಂದ್ರವು ಹುರಿಯತ್, ಜಮಿಯತ್ ಮತ್ತು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ವರದಿಯನ್ನು ಬಿಡುಗಡೆ ಮಾಡಿದೆ. ನಾವು ಹುರಿಯತ್, ಜಮಿಯತ್ ಹಾಗೂ ಪಾಕಿಸ್ತಾನದೊಂದಿಗೆ ಮಾತನಾಡುವುದಿಲ್ಲ. ಚರ್ಚೆ ನಡೆಸಿದರೆ ಕಣಿವೆಯ ಯುವಕರ ಜೊತೆ ನಡೆಸುತ್ತೇವೆ. ಅವರು ನಮ್ಮವರೇ ಆಗಿದ್ದಾರೆ ಮತ್ತು ನಾವು ಅವರೊಂದಿಗೆ ಮಾತನಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಬುಡಕಟ್ಟು ಜನಾಂಗಗಳ ನಡುವಿನ ಘರ್ಷಣೆ ಸುಮಾರು ಮೂರು ತಿಂಗಳ ಕಾಲ ಮುಂದುವರೆದಿದ್ದು ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವೈಫಲ್ಯವನ್ನು ವಿರೋಧ ಪಕ್ಷಗಳು ಟೀಕಿಸಿವೆ. ಕಳೆದ ನಾಲ್ಕು ತಿಂಗಳಿನಿಂದ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಸರ್ಕಾರ ಅಸಮರ್ಥವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಮುಂಗಾರು ಅಧಿವೇಶನಕ್ಕೆ ಮುನ್ನ ರಾಜ್ಯದಲ್ಲಿ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ದೇಶವೇ ಬೆಚ್ಚಿಬಿದ್ದಿದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಈ ಹಿಂದೆ ಜೂನ್‍ನಲ್ಲಿ ಅಮಿತ್ ಶಾ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಪ್ರತಿಪಕ್ಷಗಳು ಬಿರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದವು.
ಆ ವ್ಯಕ್ತಿ ಅಧಿಕಾರದಲ್ಲಿದ್ದರೆ ನೀವು ಶಾಂತಿಯಿಂದ ಇರಲು ಸಾಧ್ಯವಿಲ್ಲ ಎಂದು ಆರ್‍ಜೆಡಿ ಸಂಸದ ಮನೋಜ್ ಝಾ ಸಭೆಯಲ್ಲಿ ಹೇಳಿದ್ದರು. ರಾಜ್ಯದ ನಾಯಕತ್ವದಲ್ಲಿ ಪ್ರತಿಪಕ್ಷಗಳ ನಂಬಿಕೆಯ ಕೊರತೆಯನ್ನು ಎತ್ತಿ ತೋರಿಸಿದ್ದರು. ಮಣಿಪುರದ ಜನಾಂಗೀಯ ಘರ್ಷಣೆಗಳು 150 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ ಮಣಿಪುರದಲ್ಲಿ ರಾಜ್ಯ ಸರ್ಕಾರವನ್ನು ಯಾಕೆ ವಜಾಗೊಳಿಸಿಲ್ಲ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದರ ನಡುವೆಯೇ ಅಮಿತ್ ಶಾ ಕಳೆದ ತಿಂಗಳು ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಸ್ಥಾಪನೆಗೆ ಯತ್ನಿಸಿದ್ದರು