ತುಮಕೂರು : ಅಭಿವೃದ್ಧಿ ಕೆಲಸ ಮಾಡಿದಕ್ಕೆ ಜನ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ, ಆದರೆ ಕಡೆಗಣಿಸಿದ್ದಾರೆ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇದು ಕೇವಲ ನನ್ನದೊಬ್ಬನದೇ ಪರಿಸ್ಥಿತಿ ಅಲ್ಲ, ಕೆಲಸ ಮಾಡಿದ ಹಲವಾರು ಬಿಜೆಪಿ ನಾಯಕರು ಸೋತಿದ್ದಾರೆ. ಏಕೆಂದರೆ ಜನರಿಗೆ ಊರಿನ ಕೆಲಸ, ಕ್ಷೇತ್ರಕ್ಕಿಂತ ಅವರು ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಎನಿಸಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅವರ ಉಚಿತ ಭಾಗ್ಯದ ಮುಂದೆ ನಮ್ಮ ಕೆಲಸ ಕೊಚ್ಚಿಕೊಂಡು ಹೋಯಿತು. ನಾವು ಯಾವ ನೀರು ಕುಡೀತಿದ್ವಿ, ಯಾವ ರಸ್ತೆಯಲ್ಲಿ ಓಡಾಡುತ್ತಿದ್ವಿ ಎಂದು ಜನರು ಮರೆತರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮಾಡಿದ ಪಾಪಕ್ಕೆ ಮೋದಿ ಅವರನ್ನು ದೂಷಣೆ ಮಾಡುತ್ತಿದ್ದಾರೆ. ನಾವು ಅಧಿಕಾರದಲ್ಲಿ ಇದ್ದಾಗ ಕನಿಷ್ಠ 7 ಕೆಜಿ ಅಕ್ಕಿಯನ್ನು ಕೊಡಲು ಪ್ರಯತ್ನ ಪಟ್ವಿ. ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿಗೆ ಕೇಳಿಕೊಂಡಿದ್ವಿ. ಆದರೆ ಶಿಸ್ತು ಪಾಲನೆಯ ಪ್ರಧಾನಿ ನಿಯಮ ಮೀರಿ ಕೊಟ್ಟೇ ಇಲ್ಲ. ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬ ಮನುಷ್ಯನಿಗೆ ದಿನವೊಂದಕ್ಕೆ 150-200 ಗ್ರಾಂ ಅಕ್ಕಿ ಸಾಕು. ಹೀಗಾಗಿ ವೈಜ್ಞಾನಿಕವಾಗಿ ಲೆಕ್ಕಹಾಕಿ ತಿಂಗಳಿಗೆ 5 ಕೆಜಿಗೆ ಸೀಮಿತ ಮಾಡಲಾಗಿದೆ. ಸಂಕಷ್ಟ ಕಾಲದಲ್ಲಿ ಕೊಡಲು ದಾಸ್ತಾನು ಮಾಡಿಟ್ಟಿದ್ದ ಅಕ್ಕಿಯನ್ನು ಬೇಕಾಬಿಟ್ಟಿ ಹಂಚಲು ಸಾಧ್ಯವಿಲ್ಲ ಅನ್ನೋ ಅರಿವು ಕಾಂಗ್ರೆಸ್‌ಗೆ ಇರಬೇಕು ಎಂದು ಕುಟುಕಿದರು.
ಮನೆ ಸಂಸಾರ ನಡೆಸುವ ಯಜಮಾನ ಕಷ್ಟ ಕಾಲಕ್ಕೆ ಆಗಲಿ ಎಂದು ಒಂದಿಷ್ಟು ಹಣ ಕೂಡಿಡುತ್ತಾನೆ. ಅದನ್ನು ನಾನು ಸಿನಿಮಾ ನೋಡೋಕೆ, ಸ್ವೀಟ್ ತಿನ್ನೊಕೆ ಕೊಡು ಎಂದರೆ ಕೊಡೋಕಾಗುತ್ತಾ ಎಂದು ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ.