– 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನದ ವ್ಯವಸ್ಥೆ
ಮೈಸೂರು: ಆಷಾಢ ಮಾಸ ಹಿನ್ನೆಲೆಯಲ್ಲಿ 2ನೇ ಶಕ್ರವಾರವೂ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ನಾಡ ಅದಿದೇವತೆ ಚಾಮುಂಡಿ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ
ಆಷಾಢ ಮಾಸದ ಶುಕ್ರವಾರದಂದು ನಾಡದೇವತೆ ಭಕ್ತರನ್ನ ಆಶೀರ್ವದಿಸಲು ಬರುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಈ ದಿನ ದೇವಿಯ ದರ್ಶನ ಪಡೆದರೆ ಸಹಸ್ರ ಪುಣ್ಯದ ಫಲ ದೊರೆಯಲಿದೆ ಎಂಬ ಪ್ರತೀತಿ ಕೂಡ ಇದೆ. ಇದೇ ಕಾರಣದಿಂದ ಸಾವಿರಾರು ಜನರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೇ ಭಕ್ತರು ವಿವಿಧ ಸೇವೆಗಳನ್ನು ಹಾಗೂ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಹರಕೆ ಹೊತ್ತ ಭಕ್ತರು ಕಾಣಿಗೆ ನೀಡುತ್ತಿದ್ದಾರೆ.
ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಸಿಂಹವಾಹಿಣಿ ಅಲಂಕಾರದಿಂದ ಕಂಗೊಳಿಸುವಂತೆ ಮಾಡಿದ್ದು, ಬಗೆಬಗೆಯ ಹಣ್ಣುಗಳಿಂದ ಅಲಂಕಾರ ಮಾಡಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಬೆಳಗ್ಗಿನ ಜಾವ 5:30ರಿಂದಲೇ ಚಾಮುಂಡೇಶ್ವರಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ರುದ್ರಾಭಿಷೇಕ, ಪಂಚಾಮೃತ, ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೇರವೇರುತ್ತಲೇ ಇವೆ
ವಿಶೇಷ ದರ್ಶನಕ್ಕೆ 300 ರೂ. ಟಿಕೆಟ್:
2ನೇ ಶುಕ್ರವಾರ ಪಾಸ್ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ. ವಿಶೇಷ ದರ್ಶನಕ್ಕೆ 300 ರೂ. ಹಾಗೂ 50 ರೂ. ಟಿಕೆಟ್ ನಿಗದಿಪಡಿಸಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ 50 ರೂ. ಟಿಕೆಟ್ ಸಾಲಿನಲ್ಲಿ ನೇರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 5.30 ರಿಂದ ರಾತ್ರಿ 11 ಗಂಟೆವರೆಗೆ ಭಕ್ತರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.