ಜೋ ಬೈಡನ್ ಅವರು ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿ ಅವರನ್ನ ಕೇಳಬೇಕಿತ್ತು ಎಂದು ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜಂಟಿ ಸುದ್ದಿಗೋಷ್ಠಿಗೆ ಕೆಲವೇ ಗಂಟೆಗಳಿಗೂ ಮುನ್ನ ಒಬಾಮಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಜೋ ಬೈಡನ್, ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ವಿಷಯವನ್ನ ಪ್ರಸ್ತಾಪಿಸಬೇಕಿತ್ತು ಎಂದಿದ್ದರಲ್ಲದೇ, ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ಏನಾಗುತ್ತದೆ? ಎಂಬುದನ್ನು ಕೇಳುವಂತೆ ಒಬಾಮ ಹೇಳಿದ್ದರು.
ಮುಂದುವರಿದು, ಮೋದಿ ಅವರು ನನಗೆ ಚೆನ್ನಾಗಿ ಗೊತ್ತು. ಒಂದು ವೇಳೆ ನಾನು ಸಂವಾದ ನಡೆಸಿದ್ದರೆ ಕೇಳುತ್ತಿದೆ. ನೀವು ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನ ರಕ್ಷಿಸದಿದ್ದರೆ, ಭಾರತವು ಒಂದು ಹಂತದಲ್ಲಿ ಬೇರ್ಪಡುವ ಬಲವಾದ ಸಾಧ್ಯತೆಯಿದೆ. ಅದು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ ಎಂಬುದನ್ನ ಹೇಳುತ್ತಿದೆ. ಏಕೆಂದರೆ ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯು ಉಲ್ಲೇಖಿಸಬೇಕಾದ ಸಂಗತಿಯಾಗಿದೆ ಎಂದು ಅವರು ಹೇಳಿದ್ದರು.
ಅಮೆರಿಕದಲ್ಲಿ ಮೋದಿ ಖಡಕ್ ನುಡಿ:
ಅಮೆರಿಕದಲ್ಲಿ ಗುರುವಾರ ಭಾಷಣ ಮಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ನಮ್ಮ ನರನಾಡಿಯಲ್ಲಿಯೇ ಇದೆ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತೇವೆ. ಜಾತಿ-ಧರ್ಮ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. 2 ಸೂಪರ್ ಪವರ್ ದೇಶಗಳ 2 ಮಹಾನ್ ಶಕ್ತಿಗಳ ಹಾಗೂ ಇಬ್ಬರು ಸ್ನೇಹಿತರ ಮಹಾ ಸಮ್ಮಿಲನ ಇದಾಗಲಿದೆ. ಗಡಿಯಾಚಿನ ಉಗ್ರವಾದ ನಿಗ್ರಹಕ್ಕೆ ಭಾರತ-ಅಮೆರಿಕ ಜಂಟಿಯಾಗಿ ಕೆಲಸ ಮಾಡಲಿದೆ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಎರಡೂ ದೇಶಗಳ ನಡುವೆ ಹೊಸ ಶಕೆ ಆರಂಭಗೊಂಡಿದೆ. ದೇಶಗಳ ನಡುವಿನ ಒಪ್ಪಂದ ದೇಶಕ್ಕಲ್ಲದೇ ಜಗತ್ತಿಗೆ ಅನುಕೂಲ ಆಗಲಿದೆ. ಆರ್ಥಿಕ, ಬಾಹ್ಯಾಕಾಶ, ಇಂಧನ ವಿಚಾರದಲ್ಲಿ ಒಪ್ಪಂದಗಳಾಗಿದ್ದು ಇದು ಇತರೆ ದೇಶಗಳಿಗೂ ಅನುಕೂಲ ಆಗಲಿದೆ ಎಂದು ಹೇಳಿದ್ದರು.