ಮೈಸೂರು : ವಿವಿ ಕುಲಪತಿಯಾಗಿ ಪ್ರೊ. ಎನ್.ಕೆ.ಲೋಕನಾಥ್ ನೇಮಕಕ್ಕೆ ಹೈಕೋರ್ಟ್ 21 ರಂದು ತಡೆಯಾಜ್ಞೆ ನೀಡಿದ್ದು, 24 ಗಂಟೆ ಕಳೆದರೂ ಮೈಸೂರು ವಿವಿಯ ಕುಲಪತಿ ವಿಚಾರವಾಗಿ ಸರ್ಕಾರ ಸೂಕ್ತ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ವಿವಿ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ನೇಮಕಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ನೇಮಕ ಪ್ರಶ್ನಿಸಿ ಪ್ರೊ.ಶರತ್ ಅನಂತಮೂರ್ತಿ ಅವರು ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.
ಪ್ರೊ. ಶರತ್ ಅವರು ಯು.ಆರ್.ಅನಂತಮೂರ್ತಿ ಪುತ್ರ. ನಿಯಮಾವಳಿ ಉಲ್ಲಂಘಿಸಿ ಕುಲಪತಿ ನೇಮಕ ಮಾಡಲಾಗಿದೆ. ಕ್ರಿಮಿನಲ್ ಪ್ರಕರಣ ಇರುವವರನ್ನು ಕುಲಪತಿಯಾಗಿ ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಪ್ರೊ. ಎನ್.ಕೆ.ಲೋಕನಾಥ್ ಅವರಿಗೆ ಅರ್ಹತೆ ಇಲ್ಲದಿದ್ದರೂ ನೇಮಕಾತಿ ಮಾಡಲಾಗಿದೆ ಎಂದು ಪ್ರೊ. ಶರತ್ ಆರೋಪಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದ್ದರು.
ಇದೀಗ ಹೈ ಕೋರ್ಟ್ ತಡೆಯಾಜ್ಞೆ ನೀಡಿ 24 ಗಂಟೆ ಕಳೆದರೂ ಸರ್ಕಾರ ಯಾವುದೇ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ತಾತ್ಕಾಲಿಕವಾಗಿ ಪ್ರಭಾರ ವಿವಿಯ ನೆಮಕವಾಗಬೇಕಿದ್ದು ಸರ್ಕಾರ ಯಾಕೆ ಸುಮ್ಮನೆ ಕಾಲಹರಣ ಮಾಡುತ್ತಿದೆ ತಿಳಿಯುತ್ತಿಲ್ಲ. ಈ ಹಿಂದೆ ಕೆಲ ಅಕ್ರಮಗಳು ಆರೋಪಗಳು ವಿವಿಯಲ್ಲಿ ಕೇಳಿ ಬಂದಿದ್ದು ಅನೇಕ ಸಂಘಟನೆಗಳು ಹೋರಾಟ ಕೂಡ ಮಾಡಿದ್ದವು.
ಈಗ ಕುಲಪತಿ ಸ್ಥಾನಕ್ಕೆ ಹೈ ಕೋರ್ಟ್ ತಡೆ ನೀಡಿದ್ದು, ಮೈಸೂರು ವಿವಿ ಆಡಳಿತದಲ್ಲಿ ಗೊಂದಲ ಏರ್ಪಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅನೇಕ ಕಾರ್ಯ ಚಟುವಟಿಕೆಗಳ ಬಗ್ಗೆ ಕುಲಪತಿಗಳಿಲ್ಲದೆ ಯಾವ ರೀತಿಯ ಆಡಳಿತ ನಿರ್ಧಾರಗಳನ್ನು ಮೈಸೂರು ವಿವಿ ತೆಗೆದುಕೊಳ್ಳತ್ತೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಗ್ಯಾರೆಂಟಿ ಗೊಂದಲದಲ್ಲಿರುವ ಸರ್ಕಾರ ಮೈಸೂರು ವಿವಿಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವ ರೀತಿಯ ಸೂಕ್ತ ನಿರ್ಧಾರ ಕೈಗೊಳ್ಳತ್ತೋ ಕಾದು ನೋಡಬೇಕಿದೆ.