ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅದರ ಕ್ರೇಜ್ ಇನ್ನೂ ನಿಂತಿಲ್ಲ. ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿವೆ ಎನ್ನುವ ಮಾಹಿತಿ ಸಿಕ್ಕಿದೆ.
ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಈಗಾಗಲೇ ಈ ಕುರಿತು ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಲಾಗಿದೆಯಂತೆ.
ಕೆಜಿಎಫ್ ನಂತರ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ತೊಡಗಿಕೊಂಡಿದ್ದರೆ, ಯಶ್ ಇನ್ನೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಹಾಗಂತ ಸುಮ್ಮನೆಯೂ ಕೂತಿಲ್ಲ. ಮತ್ತೆ ಅಚ್ಚರಿ ಮೂಡಿಸುವಂತಹ ಸಿನಿಮಾ ಮಾಡುವ ತಯಾರಿಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಹೊಸ ಸಿನಿಮಾದ ಮಾಹಿತಿಯನ್ನು ಕೇಳಲು ಅವರ ಅಭಿಮಾನಿಗಳೂ ಕೂಡ ತುದಿಗಾಲಲ್ಲಿ ನಿಂತಿದ್ದಾರೆ.