ಮೈಸೂರು: ರಾಜ್ಯ ಸರ್ಕಾರದ ನೂತನ ಗ್ಯಾರಂಟಿಗಳ ಅಮುಷ್ಠಾನಕ್ಕೆ ಮುನ್ನವೇ ಆಟೋ ಚಾಲಕರಲ್ಲಿ ಅತಂತ್ರದ ಭೀತಿ ಕಾಡಲಾರಂಭಿಸಿದ್ದು, ಉಚಿತ ಬಸ್ ಪ್ರಯಾಣದ ಗ್ಯಾರಂಟಿ ವಿರುದ್ಧ ಹೋರಾಟ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.
ಹೌದು ಮೈಸೂರು ಜಿಲ್ಲೆಯಲ್ಲಿ ಬರೋಬ್ಬರಿ 25 ಸಾವಿರ ಮಂದಿ ಆಟೋ ಚಾಲಕರಿದ್ದು, 1.5 ಲಕ್ಷ ಕುಟುಂಬ ಅವರನ್ನೇ ಅವಲಂಬಿಸಿದ್ದಾರೆ. ಈಗಾಗಲೇ ಓಲೋ, ಉಬರ್, ರ್ಯಾಪಿಡೋ ಹೀಗೆ ಖಾಸಗಿ ಸಂಸ್ಥೆಗಳ ಬಿಕ್ಕಟ್ಟಿ ನಡುವೆಯೂ ಸಂಕಷ್ಟದ ಜೀವನ ದೂಡುತ್ತಿದ್ದಾರೆ. ಮಾತ್ರವಲ್ಲದೆ, ಕಳೆದ ಆರು ತಿಂಗಳಿಂದ ಆರ್ ಟಿಒ ನಲ್ಲಿಯೂ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಶುಲ್ಕ ದುಪ್ಪಾಟ್ಟಾಗಿರುವುದು ಆಟೋ ಚಾಲಕರನ್ನು ಕಂಗಾಲಾಗಿಸಿದೆ.
ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆಯ ಮಧ್ಯೆಯೂ ಆಟೋ ಚಾಲಕರು ಪ್ರಸ್ತುತ ದಿನಕ್ಕೆ 1500 ದಿಂದ 2000 ರೂ. ಸಂಪಾದನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಜೂ.11 ರಿಂದ ರಾಜ್ಯದೊಳಗಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿರುವುದು ಆಟೋ ಚಾಲಕರ ಕಂಗಾಲಾಗಿಸಿದೆ.
ಪ್ರಸ್ತುತ ಆಟೋಗೆ ಮಹಿಳಾ ಗ್ರಾಹಕರನ್ನೇ ಹೆಚ್ಚು ಅವಲಂಬಿಸಿದೆ. ಪುರುಷರು ಹೆಚ್ಚು ದ್ವಿಚಕ್ರ ವಾಹನ ಅವಲಂಬಿಸಿರುವುದರಿಂದ ಅತಿ ಹೆಚ್ಚು ಮಹಿಳೆಯರಿಂದಲೇ ಆಟೋ, ಟ್ಯಾಕ್ಸಿ ಸಂಚರಿಸುತ್ತಿದ್ದವು ಎನ್ನಲಾಗಿದೆ. ಆದರೆ ಸರ್ಕಾರದ ಈ ಗ್ಯಾರಂಟಿ ಯೋಜನೆ ಜಾರಿಗೂ ಮುನ್ನವೇ ಆಟೋ ಚಾಲಕರ ವಲಯಕ್ಕೆ ಆಕ್ರೋಶ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಹೋರಾಟಕ್ಕೂ ಆಟೋ ಚಾಲಕರು ನಿಶ್ಚಯಿಸಿದ್ದಾರೆ. ಹೀಗಾಗಿ ಈ ವಿರೋಧ ಮುಂದೆ ಯಾವ ರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.