ಎರಡು ದಿನಗಳ ಬೋಧಕರ ತರಬೇತಿ ಕಾರ್ಯಾಗಾರದಲ್ಲಿ ಪ್ರೊ.ಎನ್.ಕೆ.ಲೋಕನಾಥ್
ಮೈಸೂರು : ಫಲಿತಾಂಶ ಆಧಾರಿತ ಶಿಕ್ಷಣದಿಂದ ಇಂದು ಸಾಕಷ್ಟು ಅನುಕೂಲಗಳು ಇವೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಪ್ರತಿಯೊಂದು ವಿಷಯದ ಮೇಲೆ ಆಳ ಮತ್ತು ಸ್ಪಷ್ಟವಾದ ತಿಳುವಳಿಕೆ ಮತ್ತು ಜ್ಞಾನ ಪಡೆಯಬಹುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ಫಲಿತಾಂಶ ಆಧಾರಿತ ಶಿಕ್ಷಣ ಎಂಬ ಎರಡು ದಿನಗಳ ಬೋಧಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ಕಾಡುವ ಪ್ರಶ್ನೆ ಔದ್ಯೋಗಿಕ ಬದುಕಿನದ್ದು. ಈ ಔದ್ಯೋಗಿಕ ಬದುಕಿಗೆ ವಿದ್ಯಾರ್ಥಿಗಳನ್ನು ಹತ್ತಿರ ತೆಗೆದುಕೊಂಡು ಹೋಗುವುದರಲ್ಲಿ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರಾಮಾಣಿಕತೆ ಪರಿಶ್ರಮ ಮತ್ತು ಸ್ಥಿರತೆಯಿಂದ ಪ್ರಾಧ್ಯಾಪಕರುಗಳು ಬೋಧನೆ ಮತ್ತು ಮೌಲ್ಯಮಾಪನದಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದು. ಬೋಧನೆಯಲ್ಲಿ ಫಲಿತಾಂಶ ಆಧಾರಿತ ಶಿಕ್ಷಣದ ವಿಧಾನವನ್ನು ಅಳವಡಿಸಿಕೊಂಡಾಗ ಬೋಧನೆಯಲ್ಲಿ ನಿಖರತೆ ಪ್ರಾಪ್ತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಿದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮುಗೇಶಪ್ಪ ಮಾತನಾಡಿ, ಪಠ್ಯಕ್ರಮಗಳು ಬದಲಾವಣೆಯಾದಂತೆ ಪಠ್ಯಕ್ರಮಗಳ ಬೋಧನಾ ವಿಧಾನಗಳು ಬದಲಾಗುತ್ತಿರುತ್ತವೆ. ಬೋಧನೆ ಮತ್ತು ಸಂಶೋಧನೆಯಲ್ಲಿ ಸಿಗುವ ಫಲಿತಾಂಶ ಕುರಿತು ಪ್ರಾಧ್ಯಾಪಕರು ಆಲೋಚಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ನೀಡಬಹುದಾದ ಉತ್ತಮ ಬೋಧನೆಯ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು.
ಕೇರಳದ ಐಪಿಎಸ್‌ಆರ್ ಸಲ್ಯೂಷನ್ ಲಿಮಿಟೆಡ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಮೆಂಡಸ್ ಜೊಕೋಬ್ ಆಶಯ ನುಡಿಗಳನ್ನಾಡುತ್ತಾ, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಲು ಫಲಿತಾಂಶ ಆಧಾರಿತ ಶಿಕ್ಷಣದ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರುಗಳಿಬ್ಬರಿಗೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರಾಧ್ಯಾಪಕರುಗಳಿಗೆ ಇದರ ಬಗ್ಗೆ ಅರಿವು ಮೂಡಿಸಲು ಆಯೋಜಿಸಿರುವ ಈ ಕಾರ್ಯಾಗಾರ ಅತ್ಯುತ್ತಮ ಕಾರ್ಯವಾಗಿದೆ. ಇದರ ಸದುಪಯೋಗ ಪಡೆಯಿರಿ ಎಂದು ಹೇಳಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಫಲಿತಾಂಶ ಆಧಾರಿತ ಶಿಕ್ಷಣ ಪರಿಕಲ್ಪನೆಯ ಸ್ವರೂಪ ಮತ್ತು ಮಹತ್ವ ವಿವರಿಸುತ್ತಾ, ಕಲಿಕೆಯ ಫಲಿತಾಂಶಗಳು ಇಂದು ಬಹಳ ಮುಖ್ಯ. ಈ ಕಲಿಕೆಯ ಫಲಿತಾಂಶಗಳ ಬಗೆಗೆ ಪ್ರಾಧ್ಯಾಪಕರುಗಳು ಹೆಚ್ಚು ಆಲೋಚಿಸುತ್ತಿರಬೇಕು. ಪ್ರತಿಯೊಂದು ಕೋರ್ಸ್ನಲ್ಲಿಯೂ ಕಲಿಕೆಯ ಫಲಿತಾಂಶ ನಿರೀಕ್ಷೆ ಮಾಡಲಾಗುತ್ತದೆ. ಈ ಕಲಿಕೆಯ ಫಲಿತಾಂಶಗಳನ್ನು ನಿಖರವಾಗಿ ಗುರುತಿಸಿಕೊಂಡರೆ ವಿದ್ಯಾರ್ಥಿಗಳು ಮತ್ತು ಬೋಧಕರು ಹೆಚ್ಚು ಯಶಸ್ಸು ಪಡೆಯಬಹುದು. ಇದರಿಂದ ಸಾಕಷ್ಟು ಹೆಚ್ಚಿನ ಮಟ್ಟದ ಜ್ಞಾನ ಮತ್ತು ಉದ್ಯೋಗ ಪಡೆಯಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇAದ್ರ ಕುಮಾರ್, ಐಕ್ಯೂಎಸಿ ಸಂಚಾಲಕ ಡಾ.ಎನ್.ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ಇದ್ದರು.