ಲಖನೌ : ಬದ್ಧವೈರಿಗಳಾದ ಪಾಕಿಸ್ತಾನ ಮತ್ತು ಭಾರತ ಮಧ್ಯೆ ಮತ್ತೆ ಕ್ರಿಕೆಟ್ ನಡೆಯಬಹುದು ಎನ್ನುವ ಸಾಧ್ಯತೆಯ ಸುದ್ದಿ ಸುಳಿದಾಡುತ್ತಿದೆ.
ಅಕ್ಟೋಬರ್- ನವೆಂಬರ್ ನಲ್ಲಿ ಭಾರತ ಆಯೋಜಿಸುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ನೆರೆರಾಷ್ಟ್ರ ಪಾಕಿಸ್ತಾನ ಭಾಗವಹಿಸುವ ಸಂಭವ ಇದ್ದು, ಉತ್ತರಪ್ರದೇಶದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಮದಗಜಗಳ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಎಂದು ತಿಳಿದುಬಂದಿದೆ.
ಇದು ಘಟಿಸಿದ್ದೇ ಆದಲ್ಲಿ ದಶಕಗಳ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ಭಾರತದಲ್ಲಿ ಕ್ರಿಕೆಟ್ ಪಂದ್ಯ ನಡೆದಂತಾಗುತ್ತದೆ.ಪಾಕ್ ಗೆ ತೆರಳಿದ ಐಸಿಸಿ ಅಧಿಕಾರಿಗಳು: ಭಾರತದಲ್ಲಿ ನಡೆಯುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವ ಪಾಕಿಸ್ತಾನದ ನಿರ್ಧಾರದ ಖಚಿತತೆಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲ್ಲಾರ್ಡಿಸ್ ಈಗಾಗಲೇ ಲಾಹೋರ್‍ಗೆ ತೆರಳಿದ್ದಾರೆ.
ಭಾರತ ಪ್ರವಾಸಕ್ಕೆ ಪಾಕಿಸ್ತಾನ ಒಪ್ಪಿಕೊಂಡಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳನ್ನು ಉತ್ತರಪ್ರದೇಶದ ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲು ಯೋಜಿಸಲಾಗಿದೆ.
ಮೈದಾನದ ಸಿದ್ಧತಾ ಕಾರ್ಯ ಶುರು: ಭಾರತ ಪ್ರವಾಸಕ್ಕಾಗಿ ಐಸಿಸಿ ಅಧಿಕಾರಿಗಳಿಂದ ಪಾಕಿಸ್ತಾನದ ಮನವೊಲಿಕೆ ಚಾಲ್ತಿಯಲ್ಲಿದ್ದು, ಒಂದು ವೇಳೆ ಆ ದೇಶ ಒಪ್ಪಿಕೊಂಡಲ್ಲಿ ಪಂದ್ಯಗಳ ಆಯೋಜನೆಗೆ ಲಖನೌ ಕ್ರೀಡಾಂಗಣ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.
ಬಿಸಿಸಿಐ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಮೈದಾನದ ಸಿದ್ಧತೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಜಟಾಪಟಿ?: ಪಾಕಿಸ್ತಾನದಲ್ಲಿ ಈ ವರ್ಷವೇ ನಡೆಯುವ ಏಷ್ಯಾ ಕಪ್ ನಲ್ಲಿ ಭಾರತ ಭದ್ರತಾ ಕಾರಣಗಳಿಗಾಗಿ ಭಾಗವಹಿಸಲ್ಲ ಎಂದು ಹೇಳಿದೆ. ಇದರಿಂದ ಕೆರಳಿರುವ ಪಾಕಿಸ್ತಾನ ಹಾಗಾದಲ್ಲಿ ನಮ್ಮ ತಂಡವನ್ನೂ ವಿಶ್ವಕಪ್ ನಲ್ಲಿ ಆಡಲು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಗುಟುರು ಹಾಕಿದೆ. ಏಷ್ಯಾಕಪ್? ಪಂದ್ಯಾವಳಿಯನ್ನು ತಟಸ್ಥ ಅಥವಾ ಶ್ರೀಲಂಕಾದಲ್ಲಿ ನಡೆಸುವಂತೆ ಏಷ್ಯಾ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ತಿಳಿಸಿದೆ.
ಪಾಕಿಸ್ತಾನ ಕೂಡ ವಿಶ್ವಕಪ್ ನ ತನ್ನ ಪಂದ್ಯಗಳನ್ನು ಹೈಬ್ರೀಡ್ ಜಾಗದಲ್ಲಿ ಆಡಿಸಲು ಕೋರುತ್ತಿದೆ.
ಬಿಸಿಸಿಐ ಶೀಘ್ರದಲ್ಲೇ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಅಕ್ಟೋಬರ್ 5 ರಿಂದ ಟೂರ್ನಿ ಆರಂಭವಾಗಿ ನವೆಂಬರ್ 19 ರಂದು ಕೊನೆಗೊಳ್ಳಲಿದೆ. 46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಲಖನೌ ಅಲ್ಲದೇ, ನಾಗ್ಪುರ, ಬೆಂಗಳೂರು, ತಿರುವನಂತಪುರಂ, ಮುಂಬೈ, ದೆಹಲಿ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ರಾಜ್ ಕೋಟ್ ಇಂದೋರ್, ಮೊಹಾಲಿ ಮತ್ತು ಧರ್ಮಶಾಲಾ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ