ಬೆಂಗಳೂರು : ದ್ವೇಷ ರಾಜಕಾರಣದ ಹಾಗೂ ಕೀಳು ಮಟ್ಟದ ರಾಜಕಾರಣ ಮೂಲಕವೇ ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅಶ್ವಥ್ ನಾರಾಯಣ್ ಹಾಗೂ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರವೀಣ್ ನೆಟ್ಟಾರು ಪತ್ನಿಗೆ ಅನುಕಂಪದ ಆಧಾರದ ಮೇಲೆ ನೀಡಿದ ಕೆಲಸ ಕಿತ್ತುಕೊಂಡಿದೆ. ಈ ತರಹದ ಕೀಳುಮಟ್ಟಕ್ಕೆ ಸರ್ಕಾರ ಇಳಿಯುತ್ತದೆ ಎಂಬ ನೀರಿಕ್ಷೆಯನ್ನು ನಾನು ಮಾಡಿರಲಿಲ್ಲ. ಬರುವಂತಹ ದಿನಗಳಲ್ಲಿ ಈ ಬಗ್ಗೆ ಎಲ್ಲವನ್ನೂ ಪ್ರಶ್ನೆ ಮಾಡುತ್ತೇವೆ ಎಂದರು.
ತಡವಾಗಿ ಆದರೂ ಸಂಪೂರ್ಣ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವುದು ಸಂತೋಷ. ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಗ್ಯಾರಂಟಿ ಕಾರ್ಡುಗಳ ಅನುಷ್ಠಾನ ಮಾಡುವುದಾಗಿ ಹೇಳಿದ್ರು. ಗ್ಯಾರಂಟಿ ಕಾರ್ಡುಗಳ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಗೊಂದಲಗಳು ಉಂಟಾಗಿದೆ. ಗ್ಯಾರಂಟಿ ಭರವಸೆ ಆಶ್ವಾಸನೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದರು. ಒಂದು ವೇಳೆ ಗ್ಯಾರೆಂಟಿ ಈಡೇರಿಕೆ ಆಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು