ಬೆಂಗಳೂರು : ಉತ್ತರ ಕರ್ನಾಟಕದ ಲಿಂಗಾಯತ ಪ್ರಭಾವಿ ನಾಯಕ ಹಾಗೂ ಸಚಿವ ಎಂಬಿ ಪಾಟೀಲ್ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಪರಸ್ಪರ ಏರುಧ್ವನಿಯಲ್ಲಿ ಮಾತನಾಡಿದ ಪ್ರಸಂಗ ಇಂದು ವಿಧಾನ ಸೌಧದಲ್ಲಿ ನಡೆದಿದೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜನೆಯಾಗಿತ್ತು. ಈ ಸಭೆಗೆ ಆಗಮಿಸುತ್ತಿದ್ದಾಗ ಸುರೇಶ್ ಮತ್ತು ಎಂಬಿ ಪಾಟೀಲ್ ಎದುರುಬದುರು ಸಿಕ್ಕಿದ್ದಾರೆ.ಎಂಬಿಪಿಯನ್ನು ನೋಡಿದ ಸುರೇಶ್, ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತನಾಡಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಎಂಬಿಪಿ, ನಾನೇನು ಹೇಳಿಲ್ಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದ್ದನ್ನು ಹೇಳಿದ್ದೇನೆ ಎಂದು ಉತ್ತರಿಸಿದ್ದಾರೆ.
ಈ ಉತ್ತರದಿಂದ ಸಿಟ್ಟಾದ ಡಿಕೆ ಸುರೇಶ್ ಈ ರೀತಿ ಮಾತನಾಡಲು ನೀವು ಯಾರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ, ಇದನ್ನು ಕೇಳಲು ನೀವು ಯಾರು ಎಂದು ಎಂಬಿಪಿ ತಿರುಗೇಟು ನೀಡಿದ್ದಾರೆ. ವಾಕ್ಸಮರ ಜೋರಾಗುತ್ತಿದ್ದಂತೆ ಇಬ್ಬರನ್ನು ಉಳಿದ ನಾಯಕರು ಸಮಾಧಾನ ಮಾಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಶಾಸಕಾಂಗ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ. ಇದಕ್ಕೆ ಸಿದ್ದರಾಮಯ್ಯ ಸದನದ ಹೊರಗೆ ಬಹಿರಂಗವಾಗಿ ಮಾತನಾಡಿ ನನಗೆ ಮುಜುಗರ ಉಂಟು ಮಾಡಬೇಡಿ. ಸದನಕ್ಕೆ ಗೈರಾಗಿಯೂ ನನಗೆ ಮುಜುಗರ ಮಾಡಬೇಡಿ. ಅಷ್ಟು ಹೇಳಬಲ್ಲೆ ಜಾಸ್ತಿ ಏನು ಹೇಳುವುದಿಲ್ಲ ಎಂದು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ