ಸಿದ‍್ಧರಾಮಯ್ಯ ರಾಜ್ಯದ ನೂತನ ಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಆಯ್ಕೆ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.
ಈ ಕುರಿತು ನವದೆಹಲಿಯ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಅವಿರೋಧವಾಗಿ ಸಿಎಲ್ ಪಿ ನಾಯಕರ ಆಯ್ಕೆಗೆ ಪ್ರಯತ್ನಿಸುತ್ತಿದ್ದೇವೆ. 48 ರಿಂದ 72 ಗಂಟೆಯೊಳಗೆ ಹೊಸ ಸಂಪುಟ ರಚನೆ ಮಾಡುತ್ತೇವೆ ಎಂದಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಸಿಎಂ ಆಯ್ಕೆ ವಿಚಾರವಾಗಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ. ಖರ್ಗೆಯವರು ಸಿಎಂ ಆಯ್ಕೆ ಮಾಡುತ್ತಾರೆ. ಶಾಸಕರು ಸರ್ವ ಸಮ್ಮತವಾಗಿ ಖರ್ಗೆಗೆ ಅಧಿಕಾರ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎರಡು ದಿನಗಳಿಂದ ಚರ್ಚೆ ಮಾಡುತ್ತಿದ್ದಾರೆ. ಮೋದಿಯವರಾಗಿದ್ದರೇ 10ರಿಂದ 12 ದಿನಗಳನ್ನ ತೆಗೆದುಕೊಳ್ಳುತ್ತಿದ್ದರು ಎಂದು ಬಿಜೆಪಿಗೆ ಚಾಟಿ ಬೀಸಿದರು.