ಸುಸೂತ್ರ ಚುನಾವಣೆಗೆ ಹಾಗೂ ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಡಲು ಹಗಲಿರುಳು ಶ್ರಮಿಸಲು ಒಂದು ತಿಂಗಳಿಂದಲೇ ಕ್ಷೇತ್ರ ಹಾಗೂ ಜಿಲ್ಲೆಯ ಗಡಿಯಲ್ಲಿರುವ ತಪಾಸಣಾ ಕೇಂದ್ರದ ಸಿಬ್ಬಂದಿಗಳ ಆರೋಗ್ಯ ರಕ್ಷಣೆ ಜತೆಗೆ ಮತದಾನದಂದು ಆರೋಗ್ಯ ಇಲಾಖೆ ಅಗತ್ಯ ಸೇವೆಗೆ ಸಜ್ಜಾಗಿದೆ.
ಆರೋಗ್ಯ ಇಲಾಖೆಯ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಘೋಷ ವಾಕ್ಯದೊಂದಿಗೆ ಚುನಾವಣಾ ಕರ್ತವ್ಯಕ್ಕೆ ತಾಲ್ಲೂಕು ಗಡಿಗಳಲ್ಲಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರತ ಆರಕ್ಷಕ ಸಿಬ್ಬಂದಿ ಹಾಗೂ ಆರೆಸೇನಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಕಾರ್ಯಕ್ಕೆ ಮುಂದಾಗಿದೆ. ತಪಾಸಣಾ ಕೇಂದ್ರಗಳಿಗೆ ಓ.ಆರ್.ಎಸ್, ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಅಗತ್ಯ ಔಷಧಿಗಳನ್ನು ವಿತರಿಸಲಾಗುತ್ತಿದೆ.
ಈಗಾಗಲೇ ಟಿ.ನರಸೀಪುರ ತಾಲ್ಲೂಕಿನ ಮೂಗೂರು, ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಮನಹಳ್ಳಿ, ಕಂಚಮಳ್ಳಿ, ಕೆ.ಆರ್.ನಗರದ ದೊಡ್ಡೇಕೊಪ್ಪಲು, ಹುಣಸೂರು ತಾಲ್ಲೂಕಿನ ಚಿಲ್ಕುಂದ, ಮನುಗನಹಳ್ಳಿ, ನಂಜನಗೂಡಿನ ತಾಂಡವಪುರ ಮೊದಲಾದ ತಪಾಸಣಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಆರ್ ಪಿಎಫ್ ಸಿಬ್ಬಂದಿ, ಸ್ವೀಪ್ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಬಿ.ಪಿ, ಡಯಾಬಿಟಿಸ್ ತಪಾಸಣೆ ಕಾರ್ಯ ಪ್ರತಿನಿತ್ಯವೂ ನಿರಂತರವಾಗಿ ನಡೆಸುವ ಮೂಲಕ ಸುಸೂತ್ರ ಚುನಾವಣೆಗೆ ಮುನ್ನುಡಿ ಬರೆದಿದೆ.
ಮೇ.10 ರಂದು ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಿಗೆ ಮತದಾನ ಮಾಡಲು ಬರುವ ಮತದಾರರಿಗೆ ತುರ್ತು ಸೇವೆ ಒದಗಿಸಲು ಆರ್.ಬಿ.ಎಸ್.ಕೆ, ವೈದ್ಯರೊಂದಿಗೆ ತಂಡವನ್ನು ರಚಿಸಿ ನಿಯೋಜಿಸಿಕೊಳ್ಳಲಾಗಿದೆ.
ಬಾಕ್ಸ್:
ಹೊರ ರೋಗಿ ಸಲಹಾ ಚೀಟಿಯಲ್ಲೂ ಅರಿವು
ಎಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ʻಮತದಾನ ನಮ್ಮೆಲ್ಲರ ಹಕ್ಕು ತಪ್ಪದೇ ಮತದಾನ ಮಾಡಿʼ ನಮೂದಿಸಿದ ಹೊರರೋಗಿ ಚೀಟಿ ನೀಡುವ ಮೂಲಕ ಮತದಾನ ಅರಿವು ಮೂಡಿಸಲಾಗುತ್ತಿದೆ.