ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಮಾತನಾಡುವ ಯೋಗ್ಯತೆ ಎಂಎಲ್ ಸಿ ನಾರಾಯಣಸ್ವಾಮಿಯವರಿಗೆ ಇಲ್ಲ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ವಕ್ತಾರ ಜಿ.ವಿ.ಸೀತಾರಾಮು ಕಿಡಿಕಾರಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾರಾಯಣ ಸ್ವಾಮಿ ಒಬ್ಬ ಪಂಚರ್ ಗಿರಾಕಿ. ಬಿಜೆಪಿಯವರು ನಿಮ್ಮನ್ನು ಎಂಎಲ್ ಸಿ ಮಾಡಿದ್ದೇ ನೀವು ಸಿದ್ದರಾಮಯ್ಯನವರನ್ನು ಟೀಕಿಸಲಿ ಎಂದು. ನೀವು ಬಿಜೆಪಿಯವರು ಕಟ್ಟಿಹಾಕಿಕೊಂಡಿರುವ ನಾಯಿಮರಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಬಜೆಟ್ ನಲ್ಲಿ ಶೇ.24.1ರಷ್ಟು ಭಾಗವನ್ನು ಮೀಸಲಿಡುವ ಎಸ್ ಸಿ ಎಸ್ ಪಿ, ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ನಿಮ್ಮ ಸರ್ಕಾರವಲ್ಲ. ನಿಮ್ಮ ಸರ್ಕಾರ 2008ರಿಂದ 2019ರವರೆಗೆ ಖರ್ಚು ಮಾಡಿದ್ದು ಕೇವಲ 22.261ಕೋಟಿ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2013ರಿಂದ 2018ರವರೆಗೆ ಸುಮಾರು 88.395 ಕೋಟಿ ಖರ್ಚು ಮಾಡಿರುತ್ತೇವೆ. ಸಂವಿಧಾನದ ಮೇಲೆ ನಂಬಿಕೆ ಇದೆಯಾ ಛಲವಾದಿ ನಾರಾಯಣಸ್ವಾಮಿಯವರೇ, ಇದ್ದರೆ ಸಂವಿಧಾನದಲ್ಲಿ ಒಳಮೀಸಲಾತಿ ಮಾಡಬಹುದು ಎಂದು ಇದೆಯೇ ಎಂದು ಪ್ರಶ್ನಿಸಿದರು.
ದೇವನಹಳ್ಳಿಗೆ ಎಂಎಲ್ ಎ ಟಿಕೇಟ್ ಗೆ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನ್ನು ಕೇಳಿದ್ದೀರಿ, ಆದರೆ ಪಕ್ಷ ನಿಮಗೆ ಟಿಕೇಟ್ ನೀಡಲಿಲ್ಲ. ಆದರೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಿಮ್ಮನ್ನು ನಿಗಮಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದರು. ನಿಮಗೆ ಕೃತಜ್ಞತೆ ಇದೆಯೇ? ನಿಮಗೆ ಟಿಕೇಟ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಸಿದ್ದರಾಮಯ್ಯನವರನ್ನು ಟೀಕಿಸುತ್ತಿದ್ದೀರಿ ಎಂದು ಹರಿಹಾಯ್ದರು.
ಮೀಸಲಾತಿ ಬಗ್ಗೆ ಚರ್ಚೆ ಆಗಲಿ, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಮೀಸಲಾತಿ ಸಂರಕ್ಷಣಾ ವೇದಿಕೆಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.