ನಂಜನಗೂಡು: ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ಕುಡಿಯುವ ನೀರಿಗೂ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು.. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ರವರ ತವರು ಜಿಲ್ಲೆ, ಮೈಸೂರಿನ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗೋಳೂರು ಗ್ರಾಮದಲ್ಲಿ ಕಪಿಲಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಗೋಳಾಡುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಖಾಲಿ ಕೊಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆವಿದ್ದು, ಕಳೆದ ಒಂದು ವರ್ಷದಿಂದ ವಾರಕ್ಕೆ ಒಂದು ಬಾರಿ, ಕೇವಲ ಒಂದು ಗಂಟೆಗಳ ಕಾಲ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರು ಸಾಕಾಗುವುದಿಲ್ಲ. ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ, ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಕುಡಿಯುವ ನೀರಿನ ಪೈಪ್ಲೈನ್ ಹೊಡೆದು ವರ್ಷಗಳೇ ಕಳೆದರು ಸರಿಪಡಿಸುವಲ್ಲಿ ಗ್ರಾಮ ಪಂಚಾಯಿತಿಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಪೈಪ್ ಲೈನ್ ಹೊಡೆದ ಪರಿಣಾಮ ಚರಂಡಿಯ ನೀರು ಕುಡಿಯುವ ನೀರಿಗೆ ಮಿಶ್ರಣವಾಗಿ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಎರಡು ವರ್ಷಗಳಿಂದ ವಾಟರ್ ಮ್ಯಾನ್ ಗಳಿಗೂ ಸಂಬಳ ನೀಡದೆ ಗ್ರಾಮ ಪಂಚಾಯಿತಿ ಆಡಳಿತ ವಾಟರ್ ಮ್ಯಾನ್ ಗಳ ಸಂಬಳಕ್ಕೂ ಕನ್ನ ಹಾಕಿದೆ. ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಕೈ ಪಂಪ್ ಗೆ ಹೋಗಿ ನೀರು ತರಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆಗೂ ಯಾವೊಬ್ಬ ಅಧಿಕಾರಿಗಳು ಸಿಗುತ್ತಿಲ್ಲ. ಆದ್ದರಿಂದ ಕೂಡಲೇ ಪೈಪ್ ಲೈನ್ ಸರಿಪಡಿಸಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.