ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಗೌಡ ರವರನ್ನು ಇಂದು ಬೆಳಗ್ಗೆ ಆನೆ ಚೌಕೂರು ಗೇಟಿನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಇಬ್ಬರು ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭವ್ಯ ಸ್ವಾಗತವನ್ನು ನೀಡಿದ್ದಾರೆ.
ಮೈಸೂರಿನಿಂದ ಆಗಮಿಸಿದ ಲಕ್ಷ್ಮಣ್ ರವರನ್ನು ಶಾಲು ಹಾಗೂ ಹಾರ ಹಾಕುವ ಮೂಲಕ ಲೋಕಸಭಾ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಂದರ್ಭ ಬರಮಾಡಿಕೊಳ್ಳಲಾಯಿತು. ಜಿಲ್ಲೆಗೆ ಲಕ್ಷ್ಮಣ್ ಅವರನ್ನು ಸ್ವಾಗತಿಸಿ ಮಾತನಾಡಿದ ಶಾಸಕ ಎ. ಎಸ್. ಪೂನ್ನಣ್ಣನವರು ಮಾತನಾಡಿ ಇಂದಿನಿಂದ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸುತ್ತಿದ್ದೇವೆ ಮೊದಲಿಗೆ ಬಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ನಂತರ ತಲಕಾವೇರಿಯಲ್ಲಿ ಮಾತೆಕಾವೇರಿಗೆ ನಮಿಸಿ ಪೂಜಿಸಿ, ಮಾಜಿ ಯೋಧರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿ ಚುನಾವಣೆಗೆ ಅಣಿಯಾಗುತ್ತಿದ್ದೇವೆ ಎಂದರು. ಈ ಬಾರಿ ಲಕ್ಷ್ಮಣ್ ಗೌಡ ರವರ ಗೆಲುವು ನಿಶ್ಚಿತಎಂದು ಪೊನ್ನಣ್ಣನವರು ಸ್ಪಷ್ಟಪಡಿಸಿದರು.
ನಂತರ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕರಾದ ಮಂಥನಗೌಡರವರು ಕೊಡಗಿನ ಜನತೆ ನನ್ನನ್ನು ಹಾಗೂ ಪೊನ್ನಣ್ಣನವರನ್ನು ಕಳೆದ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದಾರೆ 10 ತಿಂಗಳ ನಮ್ಮ ಅಭಿವೃದ್ಧಿ ಕೆಲಸಗಳು ಗಮನಿಸಿ ಜನತೆ ಮತ ನೀಡುವಂತೆ ಕೋರಿಕೊಂಡರು. ಲಕ್ಷ್ಮಣ್ ಅವರ ಕಾರ್ಯಕ್ಷಮತೆ ಹಾಗೂ ಬದ್ಧತೆ, ಹಾಗೂ ಪಕ್ಷಕ್ಕಾಗಿ ಅವರ ತ್ಯಾಗವನ್ನು ಮನಗೊಂಡು ಅವರಿಗೆ ಟಿಕೆಟ್ ಅನ್ನು ಈ ಬಾರಿ ನೀಡಲಾಗಿದೆ ನಮ್ಮ ಚುನಾವಣೆಗಿಂತ ಇನ್ನೂ ಹೆಚ್ಚಾಗಿ ನಾವು ಕೆಲಸ ನಿರ್ವಹಿಸಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು. ಕೊಡಗಿನ ಎರಡು ಕ್ಷೇತ್ರದಲ್ಲಿ ಅತ್ಯಧಿಕ ಮತವನ್ನು ನೀಡುತ್ತೇವೆ ಎಂದರು.
ನಂತರ ಮಾತನಾಡಿದ ಲಕ್ಷ್ಮಣ್ ರವರು ಕೊಡಗಿನಲ್ಲಿ 25 ವರ್ಷಗಳ ನಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ಮುಕ್ತಿ ನೀಡಿದ್ದಾರೆ. ಕಳೆದ 10 ತಿಂಗಳಿಂದ ದಿನದ 24 ತಾಸು ಇಬ್ಬರು ಶಾಸಕರು ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಇಡೀ ಕ್ಷೇತ್ರದಲ್ಲಿ 350 ಕೋಟಿಗಿಂತ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದ್ದಾರೆ, ಅವರೊಂದಿಗೆ ಕೆಲಸ ನಿರ್ವಹಿಸಲು ನನ್ನನ್ನು ಲೋಕಸಭಾ ಸದಸ್ಯನ್ನಾಗಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಪಕ್ಷದ ರಾಜ್ಯ ಮುಖಂಡರಾದ ಚಂದ್ರಮೌಳಿ, ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.
ನಂತರ ಲಕ್ಷ್ಮಣ್ ಅವರು ನೇರವಾಗಿ ಭಾಗಮಂಡಲಕ್ಕೆ ತೆರಳಿದರು ಮಧ್ಯಾಹ್ನ 3 ಗಂಟೆಗೆ ಮಾಧ್ಯಮ ಸಂವಾದ ಕಾರ್ಯಕ್ರಮ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದು ಕೊಡಗಿನ ಅಭಿವೃದ್ಧಿಯ ಬಗ್ಗೆ ನನ್ನ ಚಿಂತನೆಯನ್ನು ಅಲ್ಲಿ ವ್ಯಕ್ತಪಡಿಸುತ್ತೇನೆ ಎಂದು ಸ್ವತಃ ಲಕ್ಷ್ಮಣ ಗೌಡ್ರು ತಿಳಿಸಿದರು