ಆನಂದ್ ಕೆ.ಎಸ್
ಚಾಮರಾಜನಗರ : ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಟಿಕೆಟ್ ನಿರಾಕರಿಸಿದ ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಇತ್ತ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಲೋಕಸಭಾ ಟಿಕೆಟ್ ಬೇಡಿಕೆ ಇಟ್ಟು ಕಾಂಗ್ರೆಸ್ ಸೇರಿರುವ ನಂಜುಂಡಸ್ವಾಮಿ ಈ ಬಾರಿ ಸ್ಥಳಿಯನಾಗಿ ನನಗೆ ಟಿಕೆಟ್ ನೀಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಬಳಿ ಡಿಮ್ಯಾಂಡ್ ಇಟ್ಟಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಬಳಿಯೂ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ.

ಇತ್ತ ಬಿಜೆಪಿ ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಬಾಲರಾಜ್ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಟಿಕೆಟ್ ಗಿಟ್ಟಿಸಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ನ ಧ್ರುವನಾರಾಯಣ್ ನಡುವೆ ನೇರಾನೇರ ಹಣಾಹಣಿ ಉಂಟಾಗಿತ್ತು. ಕಡಿಮೆ ಅಂತರದಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ ನಲ್ಲಿ ಟಿಕೆಟ್ ಪೈಪೋಟಿ ಏರ್ಪಟ್ಟಿದ್ದು ಸುನಿಲ್ ಬೋಸ್ ಗೆ ಟಿಕೆಟ್ ಕೊಡಿ ಎಂದು ಮಹದೇವಪ್ಪ ಕೇಳಿದ್ದಾರೆ.
ಕಳೆದ ಎರಡು ಬಾರಿಯೂ ಕಾಂಗ್ರೆಸ್ ನಿಂದ ಸುನಿಲ್ ಬೋಸ್ ಅವರಿಗೆ ಟಿಕೆಟ್ ಸಿಕ್ಕಿಲ್ಲ ಈ ಬಾರಿಯಾದರೂ ಸ್ಪರ್ಧೆ ಮಾಡಲು ಅವಕಾಶ ನೀಡಿ ಎಂದು ವರಿಷ್ಠರ ಮುಂದೆ ಸಾಧಕ ಬಾಧಕ ವಾದ ಮಂಡಿಸಿದ್ದಾರೆ. ಇತ್ತ ನಂಜುಂಡಸ್ವಾಮಿ ಸ್ಥಳೀಯ ನಾಯಕ ನಾನು ನನಗೆ ಟಿಕೆಟ್ ನೀಡಿ ಈ ಬಾರಿ ಚಾಮರಾಜನಗರದಲ್ಲಿ ಒಳ್ಳೆಯ ವಾತಾವರಣವಿದೆ. ಖಂಡಿತ ಗೆಲುವು ನಮ್ಮದೆ ಎಂದು ಮನವಿ ಮಾಡಿದ್ದಾರೆ.
ಈ ಬಾರಿ ಮಗನಿಗೆ ಶಾತಯಾಗತಾಯ ಟಿಕೆಟ್ ಕೊಡಿಸಲು ಮುಂದಾಗಿರುವ ಸಚಿವ ಮಹದೇವಪ್ಪ ಕೂಡ ನೀವು ಟಿಕೆಟ್ ಕೊಡಿ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಸಿದ್ದರಾಮಯ್ಯ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಚಾಮರಾಜನಗರ ಟಿಕೆಟ್ ಇನ್ನೂ ಘೋಷಣೆ ಮಾಡದೆ ವರಿಷ್ಠರು ಚಿಂತನೆ ನಡೆಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೆ ಒಳಿತು ಗೆಲ್ಲುವ ಕುದುರೆ ಯಾವುದು ಎಂದು ಮತ್ತೊಂದು ಸರ್ವೇ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ ಈ ಬಾರಿ ಕಾಂಗ್ರೆಸ್ ಟಿಕೆಟ್ ನಂಜುಂಡಸ್ವಾಮಿ ಇಲ್ಲವೇ ಸುನೀಲ್ ಬೋಸ್ ಇಬ್ಬರಲ್ಲಿ ಯಾರಿಗೆ ಸಿಗಲಿದೆ ಕಾದು ನೋಡಬೇಕಿದೆ. ಅಲ್ಲದೆ ಈ ಬಾರಿ ಮತ್ತೆ ಬಿಜೆಪಿ ಕ್ಷೇತ್ರವನ್ನು ಗೆಲ್ಲುತ್ತಾ ಅಥವಾ ತನ್ನ ಗಟ್ಟಿ ನೆಲೆಯನ್ನು ಮತ್ತೆ ಕಾಂಗ್ರೆಸ್ ವಶಕ್ಕೆ ತೆಗೆದುಕೊಳ್ಳುತ್ತಾ ಕಾದು ನೋಡಬೇಕಿದೆ.