ಭಾರತದ ಸರ್ಕಾರದ ಅಧೀನದ ಕೇಂದ್ರ ಶಿಕ್ಷಣ ಸಚಿವಾಲಯವು ಭಾರತದಲ್ಲಿರುವ ಯುವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ PM’s Scheme for Mentoring Young Authors ಎಂಬ ಯೋಜನೆಯನ್ನು ರೂಪಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಯೋಜನೆಗೆ ಕರ್ನಾಟಕದಿಂದ ಮಹೇಶ್ ಹಿರೇಮಠ ಎಂಬ ಮೈಸೂರಿನ ಯುವ ಬರಹಗಾರ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಗೆ ಭಾರತದ ವಿವಿಧ ಭಾಷೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಯುವ ಬರಹಗಾರರ ಪ್ರಸ್ತಾವನೆಗಳು ಬಂದಿದ್ದವು. ಅವುಗಳಲ್ಲಿ ಅಂತಿಮವಾಗಿ 200 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ, 2023ರ ಅಕ್ಟೋಬರ್ 25 ಮತ್ತು 26 ರಂದು ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ನಲ್ಲಿ ಉನ್ನತ ತಜ್ಞರ ಸಮಿತಿಯು 200 ಯುವ ಬರಹಗಾರರ ನೇರ ಸಂದರ್ಶನ ನಡೆಸಿತು. ಅಂತಿಮವಾಗಿ 41 ಯುವ ಬರಹಗಾರರನ್ನು ಮಾತ್ರ ಆಯ್ಕೆ ಮಾಡಿತು. ಹೀಗೆ ಆಯ್ಕೆಯಾದ ಯುವ ಬರಹಗಾರರಲ್ಲಿ ಕನ್ನಡ ಭಾಷೆಯಿಂದ ಮಹೇಶ್ ಹಿರೇಮಠ ಅವರು ಮಾತ್ರ ಆಯ್ಕೆಯಾಗಿದ್ದಾರೆ.
ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಯುವ 2.0 ಯೋಜನೆಗೆ ಆಯ್ಕೆಯಾದ 41 ಯುವ ಬರಹಗಾರರನ್ನು ಫೆಬ್ರುವರಿ 10ರಂದು ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ವಿಶೇಷ ಔತಣಕೂಟ ಏರ್ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಅಭಿನಂದನೆಗೆ ಪಾತ್ರರಾದ ವಿವಿಧ ಭಾಷೆಗಳ ಯುವ ಬರಹಗಾರರಲ್ಲಿ ಮಹೇಶ್ ಹಿರೇಮಠ ಅವರು ಮಾತ್ರ ಕನ್ನಡ ಭಾಷೆಯನ್ನು ಪ್ರತಿನಿಧಿಸಿದ್ದರು.
ಮಹೇಶ್ ಹಿರೇಮಠ ಅವರ ಪುಸ್ತಕ ಪ್ರಸ್ತಾವನೆಯ ವಿಶೇಷತೆ :
ಈ ಸ್ಪರ್ಧೆಗೆ ಯುವ ಬರಹಗಾರ ಮಹೇಶ್ ಹಿರೇಮಠ ಅವರ “ಪ್ರಜಾಪ್ರಭುತ್ವದ ರಾಯಭಾರಿಗಳು”ಎಂಬ ಪ್ರಸ್ತಾವನೆ ಆಯ್ಕೆಯಾಗಿದೆ. ಪ್ರಜಾಪ್ರಭುತ್ವದ ರಾಯಭಾರಿಗಳು ಪ್ರಸ್ತಾವನೆಯು ಕನ್ನಡ ವಚನ ಸಾಹಿತ್ಯದಲ್ಲಿರುವ ಪ್ರಜಾತಾಂತ್ರಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. 12ನೇ ಶತಮಾನದ ಸುಮಾರು 211ಕ್ಕೂ ಹೆಚ್ಚು ವಚನಕಾರರ 25 ಸಾವಿರಕ್ಕೂ ಹೆಚ್ಚು ವಚನಗಳಲ್ಲಿ ಅಡಗಿರುವ ಪ್ರಜಾತಾಂತ್ರಿಕ ವಿಚಾರಧಾರೆಗಳನ್ನು 21ನೇ ಶತಮಾನದ ಯುವ ಪೀಳಿಗೆಗೆ ತಲುಪಿಸುವ ಮಹತ್ವದ ಉದ್ದೇಶವನ್ನು “ಪ್ರಜಾಪ್ರಭುತ್ವದ ರಾಯಭಾರಿ”ಗಳು ಪುಸ್ತಕ ಹೊಂದಿದೆ. ಅಗಾಧವಾದ ವಚನ ಸಾಹಿತ್ಯದ ವಿಚಾರಧಾರೆಯಲ್ಲಿ ಹೆಕ್ಕಿದಷ್ಟು ಹೊಸ ವಿಚಾರಗಳು ಹರಿದು ಬರುತ್ತವೆ. ಕನ್ನಡ ವಚನಕಾರರ ವಿಚಾರಧಾರೆಗಳು ಎಲ್ಲ ದೃಷ್ಟಿಯಿಂದಲೂ ವಿಶ್ವಮಾನ್ಯವಾಗಿವೆ. ಪ್ಲೇಟೋನ ಚಿಂತನೆಗಳು ಮತ್ತು ಬುದ್ಧನ ಸಂಘಜೀವನಕ್ರಮ ಬಿಟ್ಟರೆ ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. 12ನೇ ಶತಮಾನದಲ್ಲಿ ಅಮೆರಿಕ ದೇಶವೇ ಇರಲಿಲ್ಲ. ಇಂಗ್ಲಂಡ್, ಫ್ರಾನ್ಸ್, ಜರ್ಮನಿ, ಚೀನ, ರಷ್ಯಾ ಹೀಗೆ ಎಲ್ಲೆಡೆ ರಾಜಪ್ರಭುತ್ವದ ಅಟ್ಟಹಾಸವೇ ಮೆರೆಯುತ್ತಿತ್ತು. ಆ ಮಧ್ಯಯುಗದಲ್ಲಿ ಕನ್ನಡ ವಚನಕಾರರು ಪ್ರಜಾಪ್ರಭುತ್ವದ ಕನಸು ಕಂಡರು. ರಾಜ್ಯಶಕ್ತಿಯನ್ನು ಪ್ರಜಾಪ್ರಭುತ್ವ ಶಕ್ತಿಯಾಗಿ ಪರಿವರ್ತಿಸುವ ಮೊದಲು ಜನರಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆ ತುಂಬ ಬಯಸಿದರು. ಆ ಮೂಲಕ ಇದ್ದ ಸಂಪ್ರದಾಯಬದ್ಧ ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸುವ ಮಹತ್ವದ ಕಾರ್ಯಕ್ಕೆ 12ನೇ ಶತಮಾನದಲ್ಲೇ ವಚನಕಾರರು ಮುನ್ನಡಿ ಬರೆದರು. 12ನೇ ಶತಮಾನದಲ್ಲಿ ವಚನಗಳನ್ನು ಬರೆದು ಪ್ರಜಾತಾಂತ್ರಿಕ ಮೌಲ್ಯಗಳ ನವಸಮಾಜದ ರೂಪುರೇಷೆಗಳನ್ನು ತೋರಿಸಿಕೊಟ್ಟರು. ಈ ಎಲ್ಲ ಹೊಸ ವಿಚಾರಧಾರೆಯನ್ನು ಹೆಕ್ಕಿ ತೆಗೆಯುವ, ಆ ಮೂಲಕ ವಚನಗಳಲ್ಲಿ ಅಡಗಿರುವ ಪ್ರಜಾತಾಂತ್ರಿಕ ಮೌಲ್ಯಗಳನ್ನು ಮತ್ತು ಪರಿಕಲ್ಪನೆಗಳನ್ನು ಗುರುತಿಸುವುದೇ ಈ ಪುಸ್ತಕದ ಮುಖ್ಯ ಆಶಯವಾಗಿದೆ.
ಯುವಬರಹಗಾರ ಮಹೇಶ್ ಹಿರೇಮಠ ಬಗ್ಗೆ :
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರಾದ ಮಹೇಶ್ ಹಿರೇಮಠ ಅವರು ತಮ್ಮ ಪದವಿ ವ್ಯಾಸಾಂಗವನ್ನು ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಅಪರಾಧಶಾಸ್ತ್ರ ಮತು ಪತ್ರಿಕೋಧ್ಯಮ ವಿಷಯದಲ್ಲಿ ಪೂರೈಸಿದ್ದಾರೆ. ನಂತರ ಮೈಸೂರು ವಿಶ್ವವಿದ್ಯಾಲಯದಿಂದ M.sc in electronic media ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಮೈಸೂರಿನಲ್ಲಿ ನೆಲೆಸಿರುವ ಮಹೇಶ್ ಹಿರೇಮಠ, ತಮ್ಮ 20ನೇ ವಯಸ್ಸಿನಲ್ಲೇ ಧರ್ಮ ಮತ್ತು ಕಾಮದ ನಡುವಿನ ಸಂಘರ್ಷದ ಕಥಾಹಂದರವನ್ನು ಹೊಂದಿರುವ “ಆ ನೆನಪುಗಳು” ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇನ್ನು ವಿದ್ಯಾರ್ಥಿದೆಸೆಯಿಂದಲೂ ಬರಹ ಮತ್ತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಹೇಶ್ ಹಿರೇಮಠ ಅವರು ಮೂರು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರಗಳು ಕೇಂದ್ರ ಸರ್ಕಾರದ ವಿಜ್ಞಾನ ಪ್ರಸಾರ ಆಯೋಜಿಸಿದ್ದ “ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋವ”ಕ್ಕೆ ಆಯ್ಕೆಯಾಗಿ, ಮುಂಬೈ, ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ಪ್ರದರ್ಶನಗೊಂಡಿವೆ.