ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿ ಇದೇ ಜನವರಿ ಇಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆ ಸಿಬ್ಬಂದಿಯಿಂದ ನಿನ್ನೆ ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ ಅವರಿಗೆ ಅಭಿನಂದನೆ ಸಲ್ಲಿದರು, ಆರತಿ ಬೆಳಗಿ ಗೌರವಿಸಿದರು.
ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 21 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 11 ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಜನವರಿ 31ರಂದೇ ಮುಖ್ಯಮಂತ್ರಿಗಳು 11 ವೈದ್ಯರ ಪೈಕಿ ಒಬ್ಬರನ್ನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮೈಸೂರು ಜಯದೇವ ಆಸ್ಪತ್ರೆಯ ಎಂ.ಎಸ್ ಸದಾನಂದ ಹಾಗೂ ಡಾ. ದಿನೇಶ್ ಹೆಸರು ರೇಸ್‌ನಲ್ಲಿದೆ ಎಂದು ಮೂಲಗಳು ತಿಳಿಸಿವೆ
ಜಯದೇವ ಸಾಧನೆಯ ಕೇವಲ ಒಬ್ಬನಿಂದಲ್ಲ, ಅದು ಎಲ್ಲರಿಗೂ ಸಲ್ಲಬೇಕು. 1989ರಲ್ಲಿ ಜಯದೇವ ಆಸ್ಪತ್ರೆ ಸೇರಿದಾಗ ನನಗೊಂದು ಕನಸಿತ್ತು. ಆಗ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಇರಲಿಲ್ಲ. 2005ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದ್ದೆ. ಆಗ ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನ ಇಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದ್ದರು. ದೊಡ್ಡವರ ಮಾತು ಕೇಳಿದ್ರೆ ಒಳ್ಳೆದಾಗುತ್ತೆ ಅನ್ನೊದಕ್ಕೆ ದೇವೇಗೌಡರ ಮಾತು ಸಾಕ್ಷಿ. ಆವತ್ತು ಅವರ ಮಾತು ಕೇಳದೇ ಇದ್ದಿದ್ದರೆ, ನಾನು ವಿದೇಶದಲ್ಲಿರುತ್ತಿದ್ದೆ. ದುಡ್ಡು ಮಾಡ್ತಿದ್ದೆ, ಆದ್ರೆ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲ. ಸಂಪತ್ತಿಗೆ ಬೆಲೆ ಕಟ್ಟಬಹುದು. ಆದ್ರೆ ಸರಳತೆ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ನೋವು ನಮಗೆ ಗೊತ್ತಾದ್ರೆ ಜೀವಂತವಾಗಿದ್ದೀವಿ ಎಂದರ್ಥ, ಬೇರೆಯವದ ನೋವು ಗೊತ್ತಾದ್ರೆ ನಾವು ಮನುಷ್ಯರಾಗಿದ್ದೀವೆ ಎಂದರ್ಥ ಎಂದು ಭಾವುಕರಾದರು.