ಶತಕೋಟಿ ಭಾರತೀಯರ ಬಹುದಿನದ ಕನಸು ನನಸಾಗುವ ದಿನ ಹತ್ತಿರವಾಗ್ತಿದೆ. ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ಭವ್ಯ ರಾಮಮಂದಿರದ ಲೋಕಾರ್ಪಣೆ ಆಗುತ್ತಿದೆ. ಆ ಶುಭ ದಿನಕ್ಕೆ ಕೋಟ್ಯಾನುಕೋಟಿ ಭಾರತೀಯರು, ದೇಶ, ವಿದೇಶದ ರಾಮಭಕ್ತರು ಎದುರು ನೋಡುತ್ತಿದ್ದಾರೆ. ಇನ್ನು ಮೂರು ದಿನ ಕಳೆದರೆ ಸಾಕು ರಾಮಮಂದಿರ ಉದ್ಘಾಟನೆ ಸೌಭಾಗ್ಯಕ್ಕೆ ದೈವಿಕ ನಗರಿ ಅಯೋಧ್ಯೆ ಸಾಕ್ಷಿಯಾಗುತ್ತಿದೆ.ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಂತಿಮ ಹಂತದ ತಯಾರಿ ಸಾಗುತ್ತಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಈ ಶುಭ ದಿನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಕೇಂದ್ರ ಸರ್ಕಾರದ ಕಚೇರಿ, ಕೇಂದ್ರ ಸರ್ಕಾರದ ಸಂಸ್ಥೆಗಳು, ಕೈಗಾರಿಕೆಗಳಿಗೆ ಜನವರಿ 22ರ ಮಧ್ಯಾಹ್ನ 2.30ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳ ಮನವಿ ಹಾಗೂ ಭಾವನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ದೂರು, ಪೆನ್ಷನ್ ಇಲಾಖೆಯಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದರ ಅನ್ವಯ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಆಚರಣೆ, ಸಂಭ್ರಮದಲ್ಲಿ ಭಾಗಿಯಾಗಲು ಜನವರಿ 22ರಂದು ಅರ್ಧ ದಿನ ರಜೆ ಘೋಷಣೆ ಮಾಡಲಾಗಿದೆ.
ದೇಶಾದ್ಯಂತ ಕೇಂದ್ರ ಸರ್ಕಾರದ ಸಿಬ್ಬಂದಿಗೆ ಈ ಅರ್ಧ ದಿನದ ರಜೆ ಅನ್ವಯವಾಗುತ್ತಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯನ್ನ ಕಣ್ತುಂಬಿಕೊಳ್ಳಲು ಕೋಟ್ಯಾನುಕೋಟಿ ಭಾರತೀಯರು ಕಾತುರರಾಗಿದ್ದಾರೆ. ಆ ದಿನದಂದು ಈಗಾಗಲೇ ಹಲವು ರಾಜ್ಯಗಳು ಮದ್ಯ ಮಾರಾಟ ನಿಷೇಧ, ಶಾಲಾ ಕಾಲೇಜಿಗಳಿಗೆ ರಜೆ ಘೋಷಣೆ ಮಾಡಿದೆ.