ದೆಹಲಿ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಮ್ಮತದ 35 ಶಾಸಕರ ಹೆಸರು ಸೂಚಿಸಿದ ಹೊರತಾಗಿಯೂ ನಿಗಮ ಮಂಡಳಿ ನೇಮಕ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ.
ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ಪಟ್ಟಿ ತೋರಿಸಿದ್ದಾರೆ. ಈ ವೇಳೆ ಕಾರ್ಯಕರ್ತರಿಗೂ (ಪಕ್ಷದ ಮುಖಂಡರಿಗೆ) ಅವಕಾಶ ಮಾಡಿಕೊಡಬೇಕು ಎಂದು ಸ್ವತ: ರಾಹುಲ್ ಗಾಂಧಿ ಪಟ್ಟು ಹಿಡಿದಿರುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ದೆಹಲಿಯಲ್ಲಿ ಶಾಸಕರ ಹೆಸರಿನ ಪಟ್ಟಿ ನೀಡಿದ ನಂತರ ರಾಹುಲ್ ಗಾಂಧಿ ಹೊಸ ಷರತ್ತು ವಿಧಿಸಿದ್ದಾರೆ. ಇದರಿಂದ ನಿಗಮ ಮಂಡಳಿ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ
ನಿಗಮ ಮಂಡಳಿಗಳಲ್ಲಿ ತಮಗೂ ಅವಕಾಶ ನೀಡಬೇಕೆಂದು ದೆಹಲಿಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್ ನಾಯಕರಲ್ಲಿ ಒತ್ತಡ ಹೇರಿದ್ದರು. ಈ ಕಾರಣಕ್ಕೆ ರಾಜ್ಯ ನಾಯಕರ ಜೊತೆ ಸಭೆ ನಡೆಸಿದ ದೆಹಲಿ ನಾಯಕರು, ಕೇವಲ ಶಾಸಕರ ಪಟ್ಟಿಗೆ ಒಪ್ಪಿಗೆ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಚುನಾವಣೆಯಲ್ಲಿ ದುಡಿದಿರುವ ನಾಯಕರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಕಾರ್ಯಕರ್ತರು, ಮುಖಂಡರ ಹೆಸರು ಇರುವ ಅಂತಿಮ ಪಟ್ಟಿಯಲ್ಲಿ ಸಲ್ಲಿಸಿದ ಬಳಿಕ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡೋಣ ಎಂದು ಸೂಚಿಸಿದ್ದಾರೆ.
ಕಾರ್ಯಕರ್ತರಿಗೂ ಅಧಿಕಾರ ನೀಡುವುದಾದರೆ ಮತ್ತೆ ಎಐಸಿಸಿ ನಾಯಕರ ಜೊತೆ ಸಭೆ ನಡೆಸಬೇಕು. ಪುನ: ಸಭೆ ನಡೆಸಿ ಕಾರ್ಯಕರ್ತರ ಹೆಸರು ಅಂತಿಮಗೊಳಿಸಲು ಕನಿಷ್ಠ 15 ದಿನವಾದರೂ ಸಮಯ ಬೇಕಾಗಬಹುದು. ಹೀಗಾಗಿ ಮುಂದಿನ ವರ್ಷದಿಂದ ನಿಗಮ ಮಂಡಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಗುವ ಸಾಧ್ಯತೆಯಿದೆ.