ದೆಹಲಿ : ಕಾವೇರಿ ನೀರು ವಿಚಾರದಲ್ಲಿ ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ದುರಂತ. ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರು ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಹೇಳಿದ್ದಾರೆ.
ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ವಿಚಾರವಾಗಿ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಇವತ್ತಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಮಹತ್ತರವಾದ ಪೆಟ್ಟು. ಬೆಂಗಳೂರಿಗೆ ಕುಡಿಯುವ ನೀರು ಬೇಕು. ಮುಂದೇನು ಆಗುತ್ತೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ. ನಮ್ಮ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಮೊದಲು ಧರಣಿ ಮಾಡಿದ್ದೆ. ಧರಣಿ ಕೂತು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಇಂದು ಸದನದಲ್ಲಿ ಕಾವೇರಿ ವಿಚಾರ ಎತ್ತಿದ್ದೇನೆ. ಕರ್ನಾಟಕ, ತಮಿಳುನಾಡಿಗೆ ಸಂಬಂಧ ಇಲ್ಲದ ಅಧಿಕಾರಿಗಳನ್ನು ಗ್ರೌಂಡ್‌ಗೆ ಕಳುಹಿಸಲಿ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ. ನಾವು ಒಪ್ಪಿಕೊಳ್ಳುತ್ತೇವೆ, ಆದರೆ ತಮಿಳುನಾಡು ಒಪ್ಪಿಕೊಳ್ಳುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟ್ಟು ಇದೆ. ನಮ್ಮ ರಾಜಕಾರಣಿಗಳಲ್ಲಿ ಇಲ್ಲ ಎಂದು ಹೇಳಿದರು
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನ್ಯಾವತ್ತೂ ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿಯಾಗಲ್ಲ. ಇಂಡಿಯಾ ಸಭೆಗೆ ಕರೆಯುವುದೇ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಿತೀಶ್ ಕುಮಾರ್‌ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಮೈತ್ರಿ ವಿಚಾರವಾಗಿ ನಾನು ಯಾರನ್ನೂ ಭೇಟಿಯಾಗಲ್ಲ. ಚರ್ಚೆಗೆ ಬಂದಾಗ ಮಾತನಾಡುತ್ತೇವೆ. ಈಗ ಎಲ್ಲಿದ್ದೇವೆ ಅಲ್ಲೇ ಇರುತ್ತೇವೆ. ಈಗ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು