ದೆಹಲಿ : ಉತ್ತರ ಭಾರತದಲ್ಲಿರುವ ಹಿಮಾಚಲಪ್ರದೇಶ, ಉತ್ತರಾಖಂಡ್, ಜಮ್ಮುಕಾಶ್ಮೀರ, ಪಂಜಾಬ್, ಹರ್ಯಾಣ ರಾಜ್ಯಗಳು ಕುಂಭದ್ರೋಣ ಮಳೆಗೆ ತತ್ತರಿಸಿವೆ. ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ.
ಇಂದೂ ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರವಾಹ, ಭೂಕುಸಿತ ಸಾಮಾನ್ಯ ಎಂಬಂತಾಗಿದ್ದು ಹಿಮಾಚಲದಲ್ಲಂತೂ ಅಲ್ಲೋಲಕಲ್ಲೋಲವಾಗಿದೆ. ನದಿಗಳೆಲ್ಲಾ ಅಪಾಯದ ಮಟ್ಟ ಮೀರಿದ್ದು, ಸಿಕ್ಕಿದ್ದನ್ನೆಲ್ಲಾ ಆಪೋಷನ ಪಡೆಯುತ್ತಿವೆ.
ಬೀಯಾಸ್ ನದಿ ರಣಾರ್ಭಟಕ್ಕೆ ಕಟ್ಟಡವೊಂದು ಕುಸಿದಿದೆ. ಕುಲು ಬಳಿ ಕಾರುಗಳು ಕೊಚ್ಚಿ ಹೋಗಿದ್ದು, ಶಿಮ್ಲಾದ ಡಿಂಗು ಮಾತೆಯ ಮಂದಿರದ ರಸ್ತೆ ನೋಡನೋಡುತ್ತಲೇ ಕುಸಿದುಬಿದ್ದಿದೆ. ಅಟಲ್ ಸುರಂಗದ ಬಳಿಯೇ ಗುಡ್ಡ ಕುಸಿತವಾಗಿದ್ದು ಕುಲು-ಮನಾಲಿ ನಡುವಿನ ರಸ್ತೆ ಬಂದ್ ಆಗಿದೆ.
ಪಂಧೋ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನೀರು ಹೊರಗೆ ಬಿಡಲಾಗಿದ್ದು, ಸಣ್ಣ ಸೇತುವೆಯೊಂದು ಮಾಯವಾಗಿದೆ. ಪಂಚವಕ್ತ್ರ ಎಂಬಲ್ಲಿ ಮರದ ದಿಮ್ಮಿಗಳ ಸಮೇತ ಜಲರಕ್ಕಸ ನಗರಕ್ಕೆ ನುಗ್ಗಿದೆ. ನಿರಂತರ ಗುಡ್ಡ ಕುಸಿತದ ಪರಿಣಾಮ ಮಾರ್ಗಮಧ್ಯೆಯೇ ಸಾವಿರಾರು ವಾಹನ ಸಿಲುಕಿವೆ.