ಮಂಡ್ಯ : ಕನ್ನಡ ಚಿತ್ರರಂಗದ ಮೇರನಟ ಚ ರಾಜಕಾರಣಿ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಇತ್ತೀಚೆಗಷ್ಟೆ ಭಾರಿ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಈ ಜೋಡಿಗಳ ಬೀಗರ ಔತಣ ಕೂಟವನ್ನು ನಡೆಸಲು ಸಂಸದೆ ಸುಮಲತಾ ಅವರು ಮಂಡ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಜೂನ್ 16ರಂದು ನಡೆಯಲಿರುವ ಬೀಗರೂಟಕ್ಕೆ ಭರ್ಜರಿ ತಯಾರಿ ಆರಂಭವಾಗಿದೆ. ನರೇಂದ್ರ ಮೋದಿಯವರ ಕಾರ್ಯಕ್ರಮ ನಡೆದಿದ್ದ ಮದ್ದೂರಿನ ಗೆಜ್ಜಲಗೆರೆಯ ಬೃಹತ್ ಮೈದಾನದಲ್ಲಿ ಬೀಗರೂಟಕ್ಕೆ ಸಿದ್ಧತೆ ಆರಂಭವಾಗಿವೆ. ಸುಮಾರು 15 ಎರಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ಗಳನ್ನು ಹಾಕಲಾಗುತ್ತಿದ್ದು, ಎಲ್ಲರಿಗೂ ನೆರಳಿನಲ್ಲಿ ಕುಳಿತು ಆರಾಮದಿಂದ ಊಟ ಸೇವಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಸುಮಾರು ಐವತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆಯನ್ನು ಮಾಡಿಸಲಾಗುತ್ತಿದ್ದು, ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್ಗಳನ್ನು ಮಾಡಲಾಗುತ್ತಿದೆ.ಬೀಗರ ಔತಣಕ್ಕೆ ಭರ್ಜರಿ ಬಾಡೂಟದ ಮೆನು ತಯಾರಿಸಲಾಗಿದೆ. 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಅನ್ನು ಬಳಸಿ ಬೀಗರೂಟ ತಯಾರು ಮಾಡಲಾಗುತ್ತಿದೆ. ಮೆನುವಿನಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ ಸೇರಿದಂತೆ ಮುಂತಾದ ಖಾದ್ಯಗಳು ಸಿದ್ದವಾಗಲಿವೆ ಎಂದು ತಿಳಿದು ಬಂದಿದೆ.