ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಚರ್ಚಿಸಲು ಮೇ 25 ರಂದು ಕರೆದಿರುವ ಸಭೆಗೆ ಮುಂಚಿತವಾಗಿ, ಹಾಸನದ ಮುಖಂಡರು ಹಾಸನ ಲೋಕಸಭಾ ಕ್ಷೇತ್ರದ ಶಾಸಕರು ಮತ್ತು ಕ್ಷೇತ್ರದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನ ಲೋಕಸಭಾ ಸಂಸದ ಪ್ರಜ್ವಲ್ ರೇವಣ್ಣ ಅವರು ಇತ್ತೀಚೆಗೆ ಹಾಸನದ ಮುಖಂಡರ ಜತೆ ಔತಣಕೂಟ ನಡೆಸಿದ್ದರು ಎಂದು ತಿಳಿದು ಬಂದಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಸನದ ಮುಖಂಡರು ಭವಾನಿ ಮತ್ತು ಪ್ರಜ್ವಲ್ ಹೆಸರನ್ನು ಒತ್ತಾಯಿಸುತ್ತಿದ್ದು, ಅಂತಿಮವಾಗಿ ದೇವೇಗೌಡರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹಾಸನದ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಹಾಸನ ನಗರ ವಿಧಾನಸಭಾ ಕ್ಷೇತ್ರವನ್ನು ಮರುಪಡೆಯುವುದು ಈ ವರ್ಷ ಜೆಡಿಎಸ್‌ಗೆ ದೊಡ್ಡ ಗೆಲುವು ಎಂದು ರೇವಣ್ಣ ಕುಟುಂಬವು ಅದರ ಶ್ರೇಯಸ್ಸನ್ನು ಹೇಳಿಕೊಳ್ಳುತ್ತಿದೆ. ದೇವೇಗೌಡರ ಜತೆಗಿನ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆಗೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಹಾಸನದಿಂದ ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕಿಳಿಸಿರುವುದಾಗಿ ಘೋಷಿಸಿ ತಮ್ಮ ನಿಲುವು ಬದಲಿಸರಿರಲಿಲ್ಲ. ಹೀಗಾಗಿ ಹಾಸನ ಟಿಕೆಟ್ ವಿಷಯಕ್ಕಾಗಿ ಭಾರೀ ಹೈಡ್ರಾಮಗಳು ನಡೆದವು. ಆದರೆ ಕೊನೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ನಿಲುವು ಬದಲಿಸದೇ ಇದ್ದರು, ಆದರೆ ಎಚ್‌ಡಿ ರೇವಣ್ಣ ಹಾಗೂ ಕುಟುಂಬ ಹಾಸನ ಟಿಕೆಟ್‌ಗೆ ಭಾರೀ ಒತ್ತಡ ತಂದಿತು. ಕೊನೆಗೆ ಟಿಕೆಟ್ ಚೆಂಡು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಅಂಗಳಕ್ಕೆ ಹೋಯಿತು, ಅಲ್ಲೂ ಕೂಡ ಎರಡೂ ಮೂರು ದಿನಗಳ ನಂತರ ಕೊನೆಗೆ ಎಚ್‌ಡಿ ಕುಮಾರಸ್ವಾಮಿ ಅವರ ನಿಲುವೇ ಗೆದ್ದಿತು.
ಈಗ ಈ ಬಾರಿಯ ಪಕ್ಷದ ಹಿನ್ನಡೆ ಹಿನ್ನೆಲೆಯಲ್ಲಿ ಪಕ್ಷದ ಹಾಲಿ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರಿಂದ ಹುದ್ದೆ ಶೀಘ್ರವೇ ಕೈತಪ್ಪುವ ಸಂಭವವಿದೆ. ಹೀಗಾಗಿ ಅಧ್ಯಕ್ಷ ಹುದ್ದೆಯನ್ನಾದರೂ ಭವಾನಿ ರೇವಣ್ಣ ಅವರಿಗೆ ನೀಡಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ ಎನ್ನಲಾಗಿದೆ.