ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅವಿವಾ ಬಿದ್ದಪ್ಪ ಮದುವೆ ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಅಂಬರೀಶ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ಅಭಿಷೇಕ್ ಅವಿವಾ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ
ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ.
ವಿಧಾನಸಭಾ ಚುನಾವಣೆ ಮುಗಿದಿದೆ. ಸ್ಯಾಂಡಲ್‌ವುಡ್ ಸ್ಟಾರ್ ವೆಡ್ಡಿಂಗ್‌ಗೆ ವೇದಿಕೆ ರೆಡಿಯಾಗುತ್ತಿದೆ. ನಟ ಅಭಿಷೇಕ್- ಅವಿವಾ ವಿವಾಹ ಇದೇ ಜೂನ್ 5 ಮತ್ತು 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಬಳಿಕ ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ.
ಏಪ್ರಿಲ್ 5ರಂದು ಅಭಿಷೇಕ್ ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದರು. ಈ ವಿಷಯವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಫೋಟೋ ಸಹಿತ ಹಂಚಿಕೊಂಡಿದ್ದರು. ಈ ಮೂಲಕ ಗಣ್ಯರನ್ನು ಆಹ್ವಾನಿಸಲು ಆರಂಭಿಸಿದ್ದರು.
ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ದಕ್ಷಿಣದ ಸ್ಟಾರ್ ಕಲಾವಿದರು ಕೂಡ ಭಾಗಿಯಾಗಲಿದ್ದಾರೆ. ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ.