ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ ಕಂಡಿದ್ದು, ಸುಮಾರು 171. 50 ರೂ. ಕಡಿತಗೊಂಡಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಹಿಂದೆ ಏಪ್ರಿಲ್‌ನಲ್ಲಿ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಗಳನ್ನು 92 ರೂ. ಇಳಿಕೆ ಮಾಡಿತ್ತು. ಇದೀಗ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿದ್ದು, ಪುನಃ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ದರ ಕಳೆದ ತಿಂಗಳಿನ ಬೆಲೆ ಮುಂದುವರೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 1856.50 ರೂ. ಆಗಿದೆ. ಈ ಹಿಂದೆ 2,028 ರೂ. ಇತ್ತು. ಅದೇ ರೀತಿ ಮುಂಬೈನಲ್ಲಿ ಈ ಮೊದಲು 1,980 ರೂ. ಇದ್ದು, ಇದೀಗ ಇದರ ಬೆಲೆ 1,808.50 ರೂ. ಆಗಿದೆ. ಚೆನ್ನೈ ನಗರದಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈ ಮೊದಲು 2,192.50 ರೂ. ಇದ್ದು, ಇದೀಗ 2,021.50 ರೂ. ಆಗಿದೆ. ಒಟ್ಟಾರೆ ಕಾರ್ಮಿಕರ ದಿನದಿಂದ ಗ್ಯಾಸ್ ಬೆಲೆ ಇಳಿದಿದ್ದು, ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.